Home Crime ಪ್ರೇಮ ಪ್ರಕರಣ : ಯುವತಿಯ ಆತ್ಮಹತ್ಯೆ – ಪ್ರಚೋದನೆ ಆರೋಪ..!

ಪ್ರೇಮ ಪ್ರಕರಣ : ಯುವತಿಯ ಆತ್ಮಹತ್ಯೆ – ಪ್ರಚೋದನೆ ಆರೋಪ..!

ಕುಂದಾಪುರ: ಶಂಕರನಾರಾಯಣ ಗ್ರಾಮ ವ್ಯಾಪ್ತಿಯ ಬೆದ್ರಕಟ್ಟೆ ಕಾಲೋನಿಯ ನಿವಾಸಿ ಶ್ರೀಮತಿ ರಮ್ಯಾ (28) ಅವರು ನೀಡಿದ ದೂರಿನ ಪ್ರಕಾರ, ಅವರ ತಂಗಿ ಶಶಿಕಲಾ (20) ಅವರು ಕುಂದಾಪುರದ ಸಾಯಿ ಆಸ್ಪತ್ರೆಯಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದರು.

ಶಶಿಕಲಾ ಅವರು ಸುಮಾರು ಒಂದು ವರ್ಷದ ಹಿಂದೆ ಮಂಜುನಾಥ (19) ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಷಯ ಕುಟುಂಬದವರಿಗೆ ತಿಳಿದಿತ್ತು. ದಿನಾಂಕ 03-04-2026 ರಂದು ಶಶಿಕಲಾ ಕಾಣೆಯಾಗಿರುವುದಾಗಿ ತಿಳಿದುಬಂದಿದ್ದು, ಕುಟುಂಬದವರು ತಲ್ಲೂರು ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ, ರಾತ್ರಿ ಸುಮಾರು 09:20 ಗಂಟೆಗೆ ಅವರ ಮನೆಯ ಹತ್ತಿರದ ಬಾವಿಯಲ್ಲಿ ಶಶಿಕಲಾ ಅವರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಕುಂದಾಪುರ ಠಾಣೆಯಲ್ಲಿ ಯು.ಡಿ.ಆರ್ (Unnatural Death Report) ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ, ಮಂಜುನಾಥನು ಶಶಿಕಲಾಳ ಬಳಿ ಹಣ ತರಿಸುವಂತೆ ಒತ್ತಡ ಹಾಕುತ್ತಿದ್ದನು. ಹಣ ಕೊಡಲು ಸಾಧ್ಯವಿಲ್ಲವೆಂದು ಹೇಳಿದಾಗ, “ಹಣ ತರಲಾರದಿದ್ದರೆ ನೀನು ನನಗೆ ಬೇಡ, ಎಲ್ಲಿಯಾದರೂ ಹೋಗಿ ಸತ್ತುಬಿಡು” ಎಂದು ಹೇಳಿ ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.