ಗಂಗೊಳ್ಳಿ: ಅತಿಯಾದ ಮದ್ಯಪಾನದ ಪರಿಣಾಮವಾಗಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಜನತಾ ಕಾಲನಿ ನಾಯಕವಾಡಿ, ಗುಜ್ಜಾಡಿ ಗ್ರಾಮದ ನಿವಾಸಿ ಮೃತ ಉಮೇಶ ಖಾರ್ವಿ (59) ಅವರು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ದೀರ್ಘಕಾಲದಿಂದ ಮದ್ಯಪಾನದ ಚಟಕ್ಕೆ ಒಳಗಾಗಿದ್ದರು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯರು ಮದ್ಯಪಾನ ಮಾಡಬಾರದು ಎಂದು ಸೂಚಿಸಿದ್ದರೂ, ಅವರು ಅದನ್ನು ಲೆಕ್ಕಿಸದೇ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದಿನಾಂಕ 06.04.2026ರಂದು ರಾತ್ರಿ ವೇಳೆ ಮನೆಯಲ್ಲಿ ಊಟ ಮಾಡದೇ ಹೊರಗಡೆ ಜಗುಲಿಯಲ್ಲಿ ಇದ್ದ ವೇಳೆ, ರಾತ್ರಿ ಸುಮಾರು 11 ಗಂಟೆ ವೇಳೆಗೆ ಜೋರಾದ ನರಳಾಟದ ಶಬ್ಧ ಕೇಳಿಬಂದಿದೆ. ತಕ್ಷಣ ಪತ್ನಿ ಹೊರಗೆ ಬಂದು ನೋಡಿದಾಗ, ಮನೆಯ ಜಗುಲಿಯ ಕಿಟಕಿಗೆ ಶಾಲು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ತಕ್ಷಣ ಕುಟುಂಬಸ್ಥರು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ರಾತ್ರಿ 11:52ಕ್ಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





