ಬೆಂಗಳೂರು : ಜೈಲಿನಿಂದ ಬಿಡುಗಡೆಯಾಗಿರುವ ರಾಷ್ಟ್ರ ರಕ್ಷಣಾ ಹೋರಾಟಗಾರ ಪುನೀತ್ ಕೆರೆಹಳ್ಳಿ, ಪೊಲೀಸರು ಮತ್ತು ಗೃಹ ಸಚಿವರಿಗೆ ನೇರ ಸವಾಲು ಹಾಕಿದ್ದಾರೆ.
“ನನ್ನ ತಾಯಿಯ ಎದುರೇ ಕುತಂತ್ರದಿಂದ ನನ್ನನ್ನು ಬಂಧಿಸಿದ್ದೀರಿ, ಇದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಎಂದಿಗೂ ಕ್ಷಮೆ ಇಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿ ಕೇಸ್ ಮಾಡಿ 300 ಕಿಲೋಮೀಟರ್ ದೂರ ಬೆಳಗಿನ ಜಾವ ಬಂದು ಬಂಧಿಸುವ ಕ್ರಮವನ್ನು ಟೀಕಿಸಿದ ಪುನೀತ್ ಕೆರೆಹಳ್ಳಿ, ಗೃಹ ಸಚಿವರು ಅಧಿಕಾರ ವಹಿಸಿಕೊಂಡ ತಕ್ಷಣ ಹಿಂದುತ್ವವಾದಿಗಳಿಗೆ ಬೆದರಿಕೆ ಎಂದು ಅವರ ಚೇಲಾಗಳು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಯಾವುದೇ ಹೆದರಿಕೆ ಇಲ್ಲ ಸರ್ಕಾರಕ್ಕೆ ಹೆದರಿಕೆ ಇದ್ದ ಕಾರಣಕ್ಕಾಗಿ ಈ ರೀತಿ ಬಂಧನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ಮಾತ್ರ ಆಧಾರವಿಲ್ಲದೆ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಖಂಡಿಸಿದ ಅವರು, “ನಾವು ದೂರು ನೀಡಿದರೆ ಇಲ್ಲಿ ಕೇಸೂ ಇಲ್ಲ, ಬಂಧನವೂ ಇಲ್ಲ” ಎಂದು ತಾರತಮ್ಯದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ತಮಗೆ ಬೆಂಬಲವಾಗಿ ನಿಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕಾನೂನು ಹೋರಾಟ ನಡೆಸಿ ಜಾಮೀನು ಒದಗಿಸಿದ ವಕೀಲರ ತಂಡಕ್ಕೆ ಪುನೀತ್ ಕೆರೆಹಳ್ಳಿ ಧನ್ಯವಾದ ಅರ್ಪಿಸಿದ್ದಾರೆ.




