Home Crime ಧರ್ಮಸ್ಥಳ ಪ್ರಕರಣ : 8 ಗಂಟೆಗಳ ಕಾಲ ಸಾಕ್ಷಿಯ ಸುದೀರ್ಘ ವಿಚಾರಣೆ ನಡೆಸಿದ ಎಸ್‌ಐಟಿ ತಂಡ…!!

ಧರ್ಮಸ್ಥಳ ಪ್ರಕರಣ : 8 ಗಂಟೆಗಳ ಕಾಲ ಸಾಕ್ಷಿಯ ಸುದೀರ್ಘ ವಿಚಾರಣೆ ನಡೆಸಿದ ಎಸ್‌ಐಟಿ ತಂಡ…!!

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದ ತನಿಖೆಗೆ ರಚಿಸಲಾದ ಎಸ್‌ಐಟಿ ಅಧಿಕಾರಿಗಳು ಶನಿವಾರ ನಗರದ ಕದ್ರಿ ಮಲ್ಲಿಕಟ್ಟೆಯ ಸರಕಾರಿ ಅತಿಥಿಗೃಹದಲ್ಲಿ ವಿಚಾರಣೆ ನಡೆಸಿದರು.

ಎಸ್‌ಐಟಿ ತಂಡದ ಡಿಐಜಿ ಎಂ.ಎನ್. ಅನುಚೇತ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ದೂರುದಾರನನ್ನು ವಿಚಾರಣೆಗೊಳಪಡಿಸಿದರು.

ಬೆಳಗ್ಗೆ 10:50ಕ್ಕೆ ವಿಚಾರಣೆ ಆರಂಭಿಸಿದ ತಂಡವು ರಾತ್ರಿ 7:20ರವರೆಗೆ ವಿಚಾರಣೆ ನಡೆಸಿದರು. ಮುಸುಕು ಧರಿಸಿದ್ದ ದೂರುದಾರನ ಜೊತೆ ಮಹಿಳಾ ನ್ಯಾಯವಾದಿ ಸಹಿತ ಇಬ್ಬರು ನ್ಯಾಯವಾದಿಗಳು ಇದ್ದರು. ಸುಮಾರು 8:30 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಬಳಿಕ ದೂರುದಾರನು ನ್ಯಾಯವಾದಿ ಗಳ ಜೊತೆ ಕಾರಿನಲ್ಲಿ ಸರಕಾರಿ ಅತಿಥಿಗೃಹದಿಂದ ಹೊರಬಂದರು.

ವಿಚಾರಣೆಯ ಬಗ್ಗೆ ಸುದ್ದಿಗಾರರು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸುದ್ದಿಗಾರರ ಕಣ್ತಪ್ಪಿಸಿ ಅಧಿಕಾರಿಗಳು ಮತ್ತೊಂದು ದಾರಿಯ ಮೂಲಕ ಸರಕಾರಿ ಅತಿಥಿಗೃಹದಿಂದ ಹೊರಹೋದರು.

ಮೂಲಗಳ ಪ್ರಕಾರ ಶನಿವಾರ ಎಸ್‌ಐಟಿ ತಂಡವು ಅನೇಕ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ. ವಿಚಾರಣೆಯ ಸಂದರ್ಭ ಎಸ್‌ಐಟಿ ತಂಡವು ದೂರುದಾರನಿಂದ ಪಡೆದ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿದೆ. ಅಲ್ಲದೆ ಲಿಖಿತವಾಗಿಯೂ ದಾಖಲಿಸಿಕೊಂಡಿವೆ ಎನ್ನಲಾಗಿದೆ. ದೂರುದಾರನಿಂದ ಪಡೆದುಕೊಂಡ ಮಾಹಿತಿಯ ಮಧ್ಯಂತರ ವರದಿಯನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.