ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ಆರೋಪಿಯೋರ್ವನಿಗೆ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ತಮಿಳುನಾಡು ಮೂಲದ ರಾಘವನ್ ಕೋಳಿಕರನ್ (24) ಶಿಕ್ಷೆಗೊಳಗಾದ ಆರೋಪಿ.2022ರಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯದ ವಾರಂಟ್ ಆಧಾರದ ಮೇಲೆ 2024ರ ಅಕ್ಟೋಬರ್ 5ರಂದು ಸುಳ್ಯ ಪೊಲೀಸರು ಈತನನ್ನು ಬಂಧಿಸಿದ್ದರು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೈದ್ಯಕೀಯ ಪರೀಕ್ಷೆಗಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಯು ಅಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ದೂಡಿ ಹಾಕಿ ಗಾಯಗೊಳಿಸಿ, ಪೊಲೀಸ್ ವಶದಿಂದ ತಪ್ಪಿಸಿಕೊಂಡು ಓಡಿಹೋಗಿದ್ದನು. ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿಯನ್ನು ಮತ್ತೆ ಬಂಧಿಸಲಾಯಿತು. ಸುಳ್ಯ ವೃತ್ತ ನಿರೀಕ್ಷಕ (ಸಿಐ) ತಿಮ್ಮಪ್ಪ ನಾಯ್ಕ ಅವರು ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ಆರೋಪದ ಮೇಲಿನ ಸಾಕ್ಷ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರು, ಸೆಕ್ಷನ್ 121(1) ಅಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ. ಸೆಕ್ಷನ್ 132 ಅಡಿಯಲ್ಲಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಹಾಗೂ ಹಲ್ಲೆ ಮಾಡಿದ್ದಕ್ಕಾಗಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ. ಸೆಕ್ಷನ್ 262 ಅಡಿಯಲ್ಲಿ ಕಾನೂನುಬದ್ಧ ಬಂಧನಕ್ಕೆ ತಡೆಯುಂಟು ಮಾಡಿದ್ದಕ್ಕಾಗಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.



