ಉಡುಪಿ: ಸೆಲ್ಫಿ ವಿಡಿಯೋವನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹51.84 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣ ಪಡೆದು ವಂಚನೆ ಎಸಗಿರುವ ಆರೋಪದಡಿ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಂಜೆಯ ತೇಜೇಶ್ವರ್ ರಾವ್ ನೀಡಿದ ದೂರಿನ ಪ್ರಕಾರ, 2018ರಿಂದ 2022ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್‌ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ನಡೆಸುತ್ತಿದ್ದ ವೇಳೆ ಝೀನತ್ ಹಾಗೂ ಗೀತಾರಾವ್ ಪರಿಚಯವಾಗಿದ್ದರು.
ಆರೋಪಿತೆ ಝೀನತ್ ಅವರು ಮೋದಿಕೇರ್ ಕಚೇರಿಯಲ್ಲಿ ಸೆಲ್ಫಿ ತೆಗೆಯುವ ನೆಪದಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದು, ಹಂತ ಹಂತವಾಗಿ ₹36.84 ಲಕ್ಷ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನೊಬ್ಬ ಆರೋಪಿತೆ ಗೀತಾರಾವ್ ಅವರು ಸಹ ಬ್ಲ್ಯಾಕ್‌ಮೇಲ್ ಮಾಡಿ ₹15 ಲಕ್ಷ ಹಣ ಪಡೆದುಕೊಂಡಿದ್ದು, ಚಿನ್ನಾಭರಣಗಳ ಜೊತೆಗೆ ಕೆಲವು ಬ್ಲ್ಯಾಂಕ್ ಚೆಕ್‌ಗಳನ್ನೂ ಪಡೆದು ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 88/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 308(6), 318(4) ಹಾಗೂ 3(5)ರಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




