Home Crime ಬಾವಿಗೆ ಬಿದ್ದು ವೃದ್ಧ ಸಾವು…!!

ಬಾವಿಗೆ ಬಿದ್ದು ವೃದ್ಧ ಸಾವು…!!

ಕಾಪು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಇನ್ನೆಂಜೆ ಗ್ರಾಮದ ಭಾಸ್ಕರ ಆಚಾರ್ಯ (78) ಎಂದು ಗುರುತಿಸಲಾಗಿದೆ.

ಭಾಸ್ಕರ ಆಚಾರ್ಯ ಅವರು ಕಳೆದ 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 6ರಂದು ಸಂಜೆ 6 ಗಂಟೆ ಸುಮಾರಿಗೆ ಕಾಪುವಿಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ಕೊಡೆ ಹಿಡಿದು ಮನೆಯಿಂದ ಹೊರಟಿದ್ದರು. ರಾತ್ರಿ ಆದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಾಪು, ಪಾಂಗಾಳ ಹಾಗೂ ಉಡುಪಿ ಭಾಗಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಅವರು ತೆಗೆದುಕೊಂಡು ಹೋಗಿದ್ದ ಕೊಡೆ ಹಾಗೂ ಚಪ್ಪಲಿಗಳು ದಾರಿಯಲ್ಲಿ ಪತ್ತೆಯಾಗಿದ್ದವು.

ಜುಲೈ 8ರಂದು ಬೆಳಿಗ್ಗೆ ಮನೆಯ ಸಮೀಪದ ಪರಿಚಯಸ್ಥರ ಬಾವಿಯಲ್ಲಿ ಭಾಸ್ಕರ ಆಚಾರ್ಯ ಅವರ ಮೃತದೇಹ ತೇಲುತ್ತಿರುವುದನ್ನು ಗಮನಿಸಿ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದರು.

ಕಾಪುವಿನಿಂದ ಮನೆಗೆ ಹಿಂದಿರುಗುವ ವೇಳೆ ಕತ್ತಲಿನಿಂದ ದಾರಿ ತಪ್ಪಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 22/2026ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.