Home Karnataka News ಮಹಿಳೆಯರ ಪರ ಚಿಂತಿಸುವ ಪಕ್ಷ ಕಾಂಗ್ರೆಸ್ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮಹಿಳೆಯರ ಪರ ಚಿಂತಿಸುವ ಪಕ್ಷ ಕಾಂಗ್ರೆಸ್ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ದಾವಣಗೆರೆ:ಕರ್ನಾಟಕದಲ್ಲಿ ಆಗಲಿ, ಕೇಂದ್ರದಲ್ಲಿ ಆಗಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಕೇಂದ್ರೀಕೃತ ಯೋಜನೆಗಳನ್ನು ಜಾರಿಗೆ ತಂದಿದೆ.‌ ಮಹಿಳೆಯರಿಗೆ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡುವ ಪಕ್ಷ ಕಾಂಗ್ರೆಸ್ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ 11ರ ಹಳೇ ಬೇತೂರ್ ರಸ್ತೆ, ಬಸವರಾಜ್ ಪೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಪ್ರಚಾರ ಕೈಗೊಂಡು ಮಾತನಾಡಿದ ಸಚಿವರು, ಯುವ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

 

ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಮಹಿಳೆಯರ ಪರ ಸದಾ ಚಿಂತಿಸುವ ಪಕ್ಷ ಕಾಂಗ್ರೆಸ್. ಬಸವರಾಜ್ ಪೇಟೆಯ 11ನೇ ವಾರ್ಡ್ ನ ಜವಾಬ್ದಾರಿಯನ್ನು ನನಗೆ ನೀಡಿದ್ದು, ಇಲ್ಲಿರುವ 11 ಬೂತ್ ಗಳಲ್ಲೂ ಸಮರ್ಥ್ ಅವರಿಗೆ ಮುನ್ನಡೆ ಕೊಡಬೇಕು. ಇನ್ನು ಎರಡು ವರ್ಷ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆಡಳಿತ ನಡೆಸಲು ಅವಕಾಶ ನೀಡಬೇಕು ಎಂದು ಸಚಿವರು ವಿನಂತಿಸಿದರು.

 

ಮಹಿಳೆಯರು ಸ್ವಾಭಿಮಾನದಿಂದ ಬದುಕುವ ಸಲುವಾಗಿ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದುವರೆಗೂ 28 ಕಂತುಗಳನ್ನು ಸುಮಾರು 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ತಲಾ 2 ಸಾವಿರ ಹಣವನ್ನು ಜಮಾ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡದೇ ಯೋಜನೆಗಳನ್ನು ಜಾರಿಗೆ ತರಲಾಗಿದೆ‌. ಎಲ್ಲರೂ ಸರ್ಕಾರಿ ಯೋಜನೆಗಳನ್ನು ಸೂಕ್ತವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ಭಾಗದ ಸಂಸದರು, ಸಚಿವರು ಹಾಗೂ ಸ್ಥಳೀಯ ಕಾರ್ಪೋರೇಟರ್ ಕೂಡ ಕಾಂಗ್ರೆಸ್ ನವರಾಗಿದ್ದು, ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಶಾಮನೂರು ಕುಟುಂಬದವರ ಹಕ್ಕಿನ ಸ್ಥಾನ ಇದಾಗಿದ್ದು, ಈ ಚುನಾವಣೆಯಲ್ಲಿ ಸಮರ್ಥ್ ಅವರನ್ನು ಗೆಲ್ಲಿಸಿ, ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.

 

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಮಾಜಿ ಕಾರ್ಪೋರೇಟರ್ ಸಯ್ಯದ್ ಚಾರ್ಲಿ, ಮಾಜಿ ಉಪ ಮೇಯರ್ ಶಾಂತಕುಮಾರ್ ಸೋಗಿ, ಕೆಪಿಸಿಸಿ ಸಂಯೋಜಕ ಶಂಕರ್ ಮೆಹರವಾಡೆ, ಮುಖಂಡರಾದ ವಿನಯ್ ಪಾಟೀಲ್, ಖಾಜಿ ಎಸ್, ರಮೇಶ್ ಹಿರೇಕೆರೂರು, ರುದ್ರಮ್ಮ, ವಾಸೀಂ, ಸರ್ಫಾಜ್ ಅಹ್ಮದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ‌