ಕೇರಳ : ಮಲಯಾಳಂ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರು ಮಹಿಳೆಗೆ ಲೈಂಗಿಕ ಕಿರಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ.
ಹೇಮಾ ಕಮಿಟಿ ವರದಿಯಲ್ಲಿ ಇವರ ಬಗ್ಗೆ ಈ ರೀತಿಯ ಸಾಕಷ್ಟು ಆರೋಪಗಳು ಎದುರಾಗಿದ್ದವು. ಈಗ ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿಯರಿಗೆ ಇವರು ಸಾಕಷ್ಟು ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಯುವ ನಟಿಯೊಬ್ಬರು ರಂಜಿತ್ ಮೇಲೆ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೆಟ್ನಲ್ಲಿ ರಂಜಿತ್ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಾಥಮಿಕ ವರದಿ ಆಧರಿಸಿ ಅವರನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ. ಕಾರ್ಯಕ್ರಮಕ್ಕೆ ಅವರು ತೆರಳುತ್ತಿದ್ದರು ಎಂದು ವರದಿ ಆಗಿದೆ.
ರಂಜಿತ್ ಅವರು ಶೂಟಿಂಗ್ ವೇಳೆ ನಟಿಯನ್ನು ಕ್ಯಾರವಾನ್ಗೆ ಕರೆದರಂತೆ. ಲೈಂಗಿಕ ಉದ್ದೇಶ ಇಟ್ಟುಕೊಂಡು ಅವರು ತಪ್ಪಾಗಿ ನಡೆದುಕೊಂಡರು ಎಂದು ನಟಿ ದೂರಲ್ಲಿ ತಿಳಿಸಿದ್ದಾರೆ. ತಕ್ಷಣ ಸ್ಥಳದಿಂದ ತೆರಳಿದ ನಟಿ, ದೂರನ್ನು ದಾಖಲು ಮಾಡಿದರು. ಇದನ್ನು ಆಧರಿಸಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ನಿರ್ದೇಶಕನ ಬಂಧನ ಆಗಿದೆ.
ಈ ಮೊದಲು ಬೆಂಗಾಳಿ ನಟಿಯೊಬ್ಬರು ರಂಜಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. 31 ವರ್ಷದ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರಂಜಿತ್ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದ. ಆದರೆ, ಆ ಸಂದರ್ಭದಲ್ಲಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು.
ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರಕುಳ ವಿಷಯದ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ವರದಿಯಲ್ಲಿ ಹೇಳಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಟಿಯರಿಗೆ ಮಲಯಾಳಂ ಚಿತ್ರರಂಗದಲ್ಲಿ ಸುರಕ್ಷತೆ ಇಲ್ಲ ಎಂದು ವರದಿ ಹೇಳಿತ್ತು.
ರಂಜಿತ್ ಅವರು ಈ ಮೊದಲು ಮೋಹನ್ಲಾಲ್ ಜೊತೆ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡಿದ್ದರು. ಇನ್ನೂ ಹಲವು ಚಿತ್ರಗಳನ್ನು ರಂಜಿತ್ ನಿರ್ದೇಶನ ಮಾಡಿದ್ದಾರೆ.





