Home Crime ಕೋಮು ಸೌಹಾರ್ದತೆಗೆ ಧಕ್ಕೆ ಆರೋಪ: ವಿಟ್ಲದ ರೌಡಿಶೀಟರ್ ಯತೀಶ್‌ಗೆ ಗಡಿಪಾರು ನೋಟಿಸ್

ಕೋಮು ಸೌಹಾರ್ದತೆಗೆ ಧಕ್ಕೆ ಆರೋಪ: ವಿಟ್ಲದ ರೌಡಿಶೀಟರ್ ಯತೀಶ್‌ಗೆ ಗಡಿಪಾರು ನೋಟಿಸ್

ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಯತೀಶ್ ಎ. ಎಂಬಾತನ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

 

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿರುವ *ಡಾ. ಅರುಣ್ ಕೆ. (IPS)* ಅವರು ಈ ನೋಟಿಸ್ ಜಾರಿಗೊಳಿಸಿದ್ದು, ಜುಲೈ 15ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

 

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಅಶ್ವಥ ನಗರ ನಿವಾಸಿಯಾದ ಯತೀಶ್ ಎ. ಎಂಬಾತನಿಗೆ ಈ ನೋಟಿಸ್ ನೀಡಲಾಗಿದೆ. ವಿಟ್ಲ ಪೊಲೀಸ್ ಠಾಣೆಯ “ಎ” ರೌಡಿ ಶೀಟರ್ ಆಗಿರುವ ಈತನ ಮೇಲೆ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಹಾಕಿ ಧರ್ಮಗಳ ನಡುವೆ ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಗಂಭೀರ ಆರೋಪವಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟುಮಾಡುವ ಹಾಗೂ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಈತನನ್ನು ಜಿಲ್ಲೆಯಿಂದ ನಿರ್ದಿಷ್ಟ ಅವಧಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಮುಂಬರುವ 15-07-2026 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಲಿಖಿತ ವಿವರಣೆ ಅಥವಾ ತಕರಾರು ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ) ತಮ್ಮ ನೋಟಿಸ್‌ನಲ್ಲಿ ಖಡಾಖಂಡಿತವಾಗಿ ಆದೇಶಿಸಿದ್ದಾರೆ.

 

ಹಿನ್ನೆಲೆ

ಆರೋಪಿ ಯತೀಶ್ ವಿರುದ್ಧ ಈ ಹಿಂದೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 2 ಪ್ರಕರಣಗಳಲ್ಲಿ ಸಾಕ್ಷಿದಾರರು ಭಯದ ಕಾರಣದಿಂದ ಸಾಕ್ಷಿ ಹೇಳದಿದ್ದರಿಂದ ಆರೋಪಿ ಖುಲಾಸೆಯಾಗಿದ್ದನು. ಇನ್ನುಳಿದ ಪ್ರಕರಣಗಳಲ್ಲಿ ಒಂದು ಸದ್ಯ ವಿಚಾರಣೆಯಲ್ಲಿದ್ದು, ಮತ್ತೊಂದು ಅಂತಿಮ ವರದಿಯೊಂದಿಗೆ ಮುಕ್ತಾಯಗೊಂಡಿದೆ.

 

ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.