Home Crime ಹೆಬ್ರಿ: ಕೋಳಿ ಹಣದ ವಿಚಾರಕ್ಕೆ ಗಲಾಟೆ – ಇಬ್ಬರು ಆರೋಪಿಗಳ ಬಂಧನ…!!

ಹೆಬ್ರಿ: ಕೋಳಿ ಹಣದ ವಿಚಾರಕ್ಕೆ ಗಲಾಟೆ – ಇಬ್ಬರು ಆರೋಪಿಗಳ ಬಂಧನ…!!

ಹೆಬ್ರಿ ತಾಲೂಕಿನ ಮುಟ್ಲುಪಾಡಿ ಅಂಡಾರು ಗ್ರಾಮದಲ್ಲಿ ಕೋಳಿ ಹಣದ ವಿಚಾರವಾಗಿ ನಡೆದ ಗಲಾಟೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯಂತೆ, ದಿನಾಂಕ 26.03.2026 ರಂದು ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಸುದರ್ಶನ ಶೆಟ್ಟಿ ಅವರ ತೋಟದಲ್ಲಿ ಕೋಳಿಗಳನ್ನು ಗೂಡಿಗೆ ಹಾಕುತ್ತಿದ್ದ ಸಂದರ್ಭದಲ್ಲಿ ಆಲ್ಟೋ ಕಾರು, ಬಿಳಿ ಬಣ್ಣದ ಕಾರು ಹಾಗೂ ನಾಲ್ಕು ಬೈಕ್‌ಗಳಲ್ಲಿ ಬಂದ ಸುಮಾರು 15 ಜನರ ಗುಂಪು ಸುದರ್ಶನ ಶೆಟ್ಟಿಗೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ವೇಳೆ ಆರೋಪಿಗಳಾದ ಹರೀಶ, ಸುದೀರ, ದುರ್ಗಾ, ಗುರುದೀಶ ಹಾಗೂ ಪ್ರತಾಪ್ ಸೇರಿದಂತೆ ಕೆಲವರು ಸುದರ್ಶನ ಶೆಟ್ಟಿಯನ್ನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ  ಪದ್ಮ ಹಾಗೂ ಆಕಾಶ ಅವರು ಬಿಡಿಸಲು ಮುಂದಾದಾಗ ಹರೀಶ್ ಅವರು ಜಾತಿ ನಿಂದನೆ ಮಾಡಿದ್ದು, ಉಳಿದವರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಆಕಾಶ್ ಮೇಲೆಯೂ ಹಲ್ಲೆ ನಡೆಸಲಾಗಿದೆ.

ಗಾಯಗೊಂಡ ಸುದರ್ಶನ ಶೆಟ್ಟಿ ಹಾಗೂ ಫಿರ್ಯಾದಿದಾರರನ್ನು ಹೆಬ್ರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೋಳಿ ಹಣ ಬಾಕಿ ಇರುವ ವಿಚಾರವೇ ಈ ಗಲಾಟೆಗೆ ಕಾರಣ ಎಂದು ತಿಳಿದುಬಂದಿದೆ.

ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿದೆ.

ಕಾರ್ಕಳ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಅಜೆಕಾರು ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಪ್ರತಾಪ್ ಪೂಜಾರಿ (32), ರೇವತಿ ನಿಲಯ, ಶೆನರಬಟ್ಟು ಬೈರಂಪಳ್ಳಿ, ಹರಿಖಂಡಿಗೆ ಬೈರಂಪಳ್ಳಿ ಗ್ರಾಮ ಹಾಗೂ ದಿಲಿಪ್ ಶೆಟ್ಟಿ (28), ಸಂಜೀವಿನಿ ನಿವಾಸ, ಸಿರಿಬೈಲು ಕೆಳಮನೆ, ಕಡ್ತಲ ಗ್ರಾಮ, ಕಾರ್ಕಳ ತಾಲೂಕು ಇವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಾಪ್‌ ಪೂಜಾರಿ
ದಿಲಿಪ್‌ ಶೆಟ್ಟಿ