ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಟ್ಲುಪಾಡಿಯಲ್ಲಿ ಕೋಳಿ ಖರೀದಿಸಲು ಹೋಗಿದ್ದ ವೇಳೆ ನಡೆದ ಗಲಾಟೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿಯಂತೆ, ದಿನಾಂಕ 27.03.2026ರಂದು ಸುಜಯ ಎಂಬುವರು ಮಹೇಶ್ ಅವರೊಂದಿಗೆ ಮುಟ್ಲುಪಾಡಿಯಲ್ಲಿರುವ ಸುಧರ್ಶನ್ ಅವರಿಗೆ ಸೇರಿದ ಕೋಳಿ ಅಂಗಡಿಗೆ ಕೋಳಿ ಖರೀದಿಸಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಹರೀಶ್ ಪೂಜಾರಿ ಅವರು ಸುಧರ್ಶನ್ ಅವರಿಂದ ಬರಬೇಕಾಗಿದ್ದ ₹12,000 ಹಣ ಪಡೆಯುವ ವಿಚಾರವಾಗಿ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭ ಸುಜಯ ಅವರು ವಿಚಾರ ಕೇಳಿದಾಗ ಸುಧರ್ಶನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆನ್ನೆಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಆ ಬಳಿಕ ಅಲ್ಲಿದ್ದ ಇತರ ಆರೋಪಿತರೊಂದಿಗೆ ಸೇರಿ ಸುಜಯ, ಮಹೇಶ್ ಮತ್ತು ಹರೀಶ್ ಪೂಜಾರಿ ಅವರಿಗೆ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗುದ್ದಿ ಕೆಳಗೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಅಕ್ಷಯ ಎಂಬಾತ “ಮತ್ತೊಮ್ಮೆ ಹಣ ಕೇಳಿದರೆ ಕೊಂದುಹಾಕುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾರ್ಕಳ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಅಜೆಕಾರು ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸುಧರ್ಶನ್ ಶೆಟ್ಟಿ (36), ಮೇಲ್ಮನೆ ಮುಟ್ಲುಪಾಡಿ, ಅಂಡಾರು ಗ್ರಾಮ ಹಾಗೂ ಆಕಾಶ್ (21), ಶಿವಕೃಪಾ ಮೂಡುಕುಡೂರು, ವರಂಗ ಗ್ರಾಮ ಇವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





