Home Latest ಮಂಗಳೂರಿಗೆ ಆಗಮಿಸಿ ಬಾಲಿವುಡ್ ನಟ ಶಾರುಖ್ ಖಾನ್ : ವಿಮಾನ ನಿಲ್ದಾಣದ ಬಳಿ ಜಮಾಯಿಸಿದ ಅಭಿಮಾನಿಗಳು…!!

ಮಂಗಳೂರಿಗೆ ಆಗಮಿಸಿ ಬಾಲಿವುಡ್ ನಟ ಶಾರುಖ್ ಖಾನ್ : ವಿಮಾನ ನಿಲ್ದಾಣದ ಬಳಿ ಜಮಾಯಿಸಿದ ಅಭಿಮಾನಿಗಳು…!!

ಮಂಗಳೂರು: ಬಾಲಿವುಡ್‌ ಬಾದ್‌ಶಾ, ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ನಟನನ್ನು ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರುಖ್ ಖಾನ್ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಮೊದಲೇ ಹರಡಿದ್ದರಿಂದ, ಬೆಳಗ್ಗೆಯಿಂದಲೇ ಅನೇಕ ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಸೇರಿದ್ದರು. ತಮ್ಮ ನೆಚ್ಚಿನ ನಟನನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕೆಂಬ ಆಸೆಯಿಂದ ನೂರಾರು ಜನರು ಕಾಯುತ್ತಿದ್ದರು. ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಶಾರುಖ್ ಖಾನ್ ಹೊರಬರುತ್ತಿದ್ದಂತೆ ಅಭಿಮಾನಿಗಳ ಸಂತೋಷ ವ್ಯಕ್ತಪಡಿಸಿದ್ದಾರೆ.

ನಟನ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ಜಂಟಿಯಾಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಜನಸಂದಣಿಯನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಶಾರುಖ್ ಖಾನ್ ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದು ಸುರಕ್ಷಿತವಾಗಿ ವಾಹನದವರೆಗೆ ಕರೆದೊಯ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಶಾರುಖ್ ಖಾನ್ ಅವರ ಈ ಮಂಗಳೂರು ಭೇಟಿ ಹಿಂದೆ ಪ್ರಮುಖ ಕಾರಣ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ವಿಶೇಷ ಕಾರ್ಯಕ್ರಮವಾಗಿದೆ. ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್ ಅವರ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆಗಳನ್ನು ಮಾಡಲಾಗಿದೆ.

ಇಂದು ಸಂಜೆ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಆ್ಯನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಎಂಬ ಹೆಸರಿನಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗವಹಿಸಿ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದು, ವಿಶೇಷ ಅತಿಥಿಯಾಗಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಶಾರುಖ್ ಖಾನ್ ಅವರ ಭೇಟಿ ಮಂಗಳೂರಿನ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸಾಮಾನ್ಯವಾಗಿ ಸಿನಿಮಾ ಪ್ರಚಾರ ಅಥವಾ ಚಿತ್ರೀಕರಣದ ಸಂದರ್ಭಗಳಲ್ಲಿ ಮಾತ್ರ ದಕ್ಷಿಣ ಭಾರತದ ವಿವಿಧ ನಗರಗಳಿಗೆ ಭೇಟಿ ನೀಡುವ ನಟ, ಈ ಬಾರಿ ಖಾಸಗಿ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಆಗಮಿಸಿರುವುದು ವಿಶೇಷ ಗಮನ ಸೆಳೆದಿದೆ.