ಉಡುಪಿ: ಜಿಲ್ಲೆಯ ಅಕ್ಕಿ ಮಿಲ್ಗಳಲ್ಲಿ ಭತ್ತ ನೀಡುವ ರೈತರು ಹಣದ ಬದಲಿಗೆ ಅಕ್ಕಿ ನೀಡುವಂತೆ ಕೋರಿದರೆ ಕಳಪೆ ಗುಣಮಟ್ಟದ ಅಕ್ಕಿಯನ್ನು ನೀಡಿ ವಂಚಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಭತ್ತವನ್ನು ಅಕ್ಕಿಮಿಲ್ನವರಿಗೆ ಮಾರಾಟ ಮಾಡುವಾಗ ಮಿಲ್ನವರು ಭತ್ತಕ್ಕೆ ದರ ನಿಗದಿ ಮಾಡುತ್ತಾರೆ. ಹಣದ ಬದಲು ಅಕ್ಕಿಯನ್ನೇ ಹಿಂತಿರುಗಿಸುವಂತೆ ಕೋರಿದಾಗ ಮಿಲ್ನವರು ರೈತ ನೀಡಿದ ಭತ್ತದ ಅಕ್ಕಿ ಬದಲಿಗೆ ಯಾವುದೋ ಕಳಪೆ ಗುಣಮಟ್ಟದ ಅಕ್ಕಿಯನ್ನು ಹೆಚ್ಚಿನ ದರ ನಿಗದಿ ಮಾಡಿ ವಾಪಾಸು ನೀಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ಸಮಸ್ಯೆ ಬಗ್ಗೆ ಕಾರ್ಕಳ ಭಾಗದ ರೈತರು ಪಕ್ಷದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕೆಲವು ಮಿಲ್ ಗಳಲ್ಲಿ ಮೋಸ ನಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಈ ಬಗ್ಗೆ ರೈತರು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮವಾಗಿಲ್ಲ. ಜಿಲ್ಲೆಯಲ್ಲಿ ಈಗ ಭತ್ತ ಕಟಾವಿಗೆ ಬರುತ್ತಿದ್ದು, ಅಧಿಕಾರಿಗಳು ತಕ್ಷಣದಿಂದಲೇ ಕ್ರಮಕ್ಕೆ ಮುಂದಾಗಬೇಕು. ರೈತರಿಗೆ ಉಂಟಾಗುತ್ತಿರುವ ನಷ್ಟವನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಾಜೇಶ್ ಕೆ.ವಿ., ನಿರುಪಾದಿ ಗೋಮರ್ಸಿ, ಸಂತೋಷ್, ರವಿ ಕುಮಾರ್, ಆರತಿ, ಸಖೀರ್, ಶ್ರೀನಿವಾಸ, ಸದಾಶಿವ ಉಪಸ್ಥಿತರಿದ್ದರು.



