ಉಡುಪಿ: ಮಣಿಪಾಲದ ಈಶ್ವರನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯವಾಗುವಂತೆ ಮಾಡಿದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಜೂನ್ 19ರಂದು ರಾತ್ರಿ 10.08ರ ಸುಮಾರಿಗೆ ಮಣಿಪಾಲದ ಸಾಯಿಸಾಗರ್ ಹೋಟೆಲ್ ಎದುರಿನ ಯು-ಟರ್ನ್ ಬಳಿ ಈ ಅಪಘಾತ ಸಂಭವಿಸಿತ್ತು.
ಕರ್ವಾಲು ಅಲೆವೂರು
ಗ್ರಾಮದ ಅಭಿಷೇಕ್ ನಾಯಕ್ (21) ಅವರು ತಮ್ಮ ಸ್ಕೂಟಿಯಲ್ಲಿ ಕೆಳಪರ್ಕಳದಲ್ಲಿರುವ ಮನೆಗೆ ತೆರಳುತ್ತಿದ್ದ ವೇಳೆ, ಎಂಐಟಿ ಕಡೆಯಿಂದ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾರನ್ನು ಕಾರ್ಕಳ ತಾಲೂಕಿನ ಮುಡಾರು ನಿವಾಸಿ ಸಮೇಗ್ದ್ ಎಲ್.ಜೆ. (25) ಎಂಬಾತ ಚಲಾಯಿಸುತ್ತಿದ್ದು, ಮದ್ಯಪಾನದ ಅಮಲಿನಲ್ಲಿ ಅಜಾಗರೂಕವಾಗಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಅಭಿಷೇಕ್ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಕೂಟಿ ಹಾಗೂ ಕಾರು ಜಖಂಗೊಂಡಿವೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜೂನ್ 22ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.



