Home Latest ಮಲ್ಪೆ: ಪಿಕಪ್ ವಾಹನ ಡಿಕ್ಕಿ – ರಸ್ತೆ ದಾಟುತ್ತಿದ್ದ ವೃದ್ಧ ಮೃತ್ಯು..!

ಮಲ್ಪೆ: ಪಿಕಪ್ ವಾಹನ ಡಿಕ್ಕಿ – ರಸ್ತೆ ದಾಟುತ್ತಿದ್ದ ವೃದ್ಧ ಮೃತ್ಯು..!

ಮಲ್ಪೆ, ಮಾ.16: ಪಿಕ್‌ಅಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬನ್ನಂಜೆ ನಿವಾಸಿ ಮೌನೇಶ್ ಡಿ.ವೈ (49) ಅವರು ದ್ವಿಚಕ್ರ ವಾಹನದಲ್ಲಿ ಮಲ್ಪೆಯಲ್ಲಿರುವ ಗೆಳೆಯರ ಮನೆಗೆ ಹೋಗಲು ಕರಾವಳಿ ಮಾರ್ಗವಾಗಿ ಮಲ್ಪೆ ಬಾಪುತೋಟದಿಂದ ಕೊಡವೂರು ಕಡೆಗೆ ಹೋಗುವ ಒಳ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ಕೊಪ್ಪಲತೋಟ ಬಬ್ಬುಸ್ವಾಮಿ ದೇವಸ್ಥಾನದ ಎದುರಿನ ಅಂಗಡಿಯ ಮುಂಭಾಗದಲ್ಲಿ ಬೆಳಿಗ್ಗೆ ಸುಮಾರು 11:30 ಗಂಟೆಗೆ ಅಪಘಾತ ಸಂಭವಿಸಿದೆ.

ರಸ್ತೆಯ ಎಡಬದಿಯಿಂದ ಸಿಎಸ್ಐ ಚರ್ಚ್ ಕಡೆಯಿಂದ ಬಾಪುತೋಟದ ಕಡೆಗೆ ನಡೆದುಕೊಂಡು ಬರುತ್ತಿದ್ದ ವಿಠ್ಠಲ್ ಕೋಟ್ಯಾನ (77) ಅವರಿಗೆ ಅವರ ಹಿಂಬದಿಯಿಂದ ಬಂದ ಜೀತೋ ಕಂಪನಿಯ ಪಿಕ್‌ಅಪ್ ವಾಹನ (KA-19-AB-8224) ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಡಿಕ್ಕಿಯ ಪರಿಣಾಮ ವಿಠ್ಠಲ್ ಕೋಟ್ಯಾನ ಅವರು ರಸ್ತೆಗೆ ಬಿದ್ದು ತಲೆಗೆ ಹಾಗೂ ಬಲ ಕಾಲಿಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಅಂಬ್ಯುಲೆನ್ಸ್ ಮೂಲಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.