ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ನಿವಾಸಿ ಗಣೇಶ ಶೆಟ್ಟಿ (27) ಅವರ ತಂಗಿ ಲಕ್ಷ್ಮೀ ರಾಜು ಶೆಟ್ಟಿ (24) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಲಕ್ಷ್ಮೀ ರಾಜು ಶೆಟ್ಟಿ ಅವರು ಕಂದೆಬೈಲು ಮನೆಯಲ್ಲಿ ತಂದೆ, ತಾಯಿ, ಅಜ್ಜಿ ಹಾಗೂ ಅಣ್ಣನೊಂದಿಗೆ ವಾಸವಾಗಿದ್ದು, ಕಳೆದ 4-5 ತಿಂಗಳಿನಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ ಹಾಗೂ ಉಡುಪಿಯ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಸಂಪೂರ್ಣ ಗುಣಮುಖಳಾಗಿರಲಿಲ್ಲ ಎನ್ನಲಾಗಿದೆ.
ಏಪ್ರಿಲ್ 24, 2026 ರಂದು ಬೆಳಿಗ್ಗೆ ಮನೆ ಕೆಲಸಗಳನ್ನು ಮುಗಿಸಿ ಸುಮಾರು 9.30 ಗಂಟೆಗೆ ತನ್ನ ಮಲಗುವ ಕೋಣೆಗೆ ತೆರಳಿದ ಅವರು, ಒಳಗಿನಿಂದ ಬಾಗಿಲು ಅಡ್ಡಮಾಡಿಕೊಂಡಿದ್ದರು. ಬಳಿಕ ಸುಮಾರು 11.00 ಗಂಟೆ ವೇಳೆಗೆ ಅಜ್ಜಿ ಕೋಣೆಗೆ ಹೋಗಿ ನೋಡಿದಾಗ, ಕಿಟಕಿಯ ಸರಳಿಗೆ ವೇಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಳಾಗಿ ಕಂಡುಬಂದಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.





