Home Dskshina Kannada ಏ.2ರಂದು ನಂದಳಿಕೆ ಅಯನೋತ್ಸವ ಸಿರಿ ಜಾತ್ರಾ ಮಹೋತ್ಸವ..!!

ಏ.2ರಂದು ನಂದಳಿಕೆ ಅಯನೋತ್ಸವ ಸಿರಿ ಜಾತ್ರಾ ಮಹೋತ್ಸವ..!!

ಕಾರ್ಕಳ: ನಂದಳಿಕೆ ಶ್ರೀ ಮಹಾಲಿಂಗೇಶ್ವರ ಸ್ವಾಮೀ ಪುಣ್ಯ ಸನ್ನಿಧಾನದಲ್ಲಿ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ ಏಪ್ರಿಲ್ 2ರಂದು ಸಂಭ್ರಮದಿಂದ ನಡೆಯಲಿದೆ. ವರ್ಷದಿಂದ ವರ್ಷಕ್ಕೆ ಕ್ಷೇತ್ರದಲ್ಲಿ ಸಿರಿ ಜಾತ್ರೆಯ ಸಂದರ್ಭ ಭಕ್ತಾದಿಗಳ ಸಂಖ್ಯೆ ಅಧಿಕವಾಗಿದ್ದು , ಬರುವ ಭಕ್ತಾದಿಗಳಿಗೆ ಸಕಲ ಸೌಕರ್ಯ ಒದಗಿಸಲು ನೂರಾರು ಸ್ವಯಂಸೇವಕರ ತಂಡ ಸಜ್ಜಾಗಿದೆ ಎಂದು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ನಾಲ್ಕು ಸ್ಥಾನ, ನಂದಳಿಕೆ ಇದರ ಆಡಳಿತ ಮೊಕ್ತೇಸರ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಹೇಳಿದರು.

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವದ ಕುರಿತಾಗಿ ರೂಪುರೇಷೆಗಳ ಬಗ್ಗೆ ಸ್ವಯಂ ಸೇವಕರ ಮತ್ತು ದೇವಳದ ಸಿಬ್ಬಂದಿ ವರ್ಗದವರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಿರಿಜಾತ್ರೆಯ ಬಳಿಕ ದೇವಾಲಯದ ಅಗತ್ಯತೆಯನ್ನು ನೋಡಿಕೊಂಡು ಜೀರ್ಣೋದ್ಧಾರ ಕಾರ್ಯ ಕೂಡ ನಡೆಯಲಿದೆ ಎಂದು ಅವರು ತಿಳಿಸಿದರು.

ಮಾರ್ಚ್ 29ರಂದು ಬೆಳಗ್ಗೆ ಗಂಟೆ 10ಕ್ಕೆ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಅಬ್ಬಗ ದಾರಗ ಸಾನ್ನಿಧ್ಯದಲ್ಲಿ ಶ್ರೀ ಕುಮಾರ, ಅಬ್ಬಗ-ದಾರಗ ದರ್ಶನ, ಮಾರ್ಚ್ 30ರಂದು ರಾತ್ರಿ 9ಕ್ಕೆ ಧ್ವಜಾರೋಹಣ, ಮಹಾರಂಗ ಪೂಜೆ, ಉತ್ಸವ ಬಲಿ ನಡೆಯಲಿದೆ. ಮಾರ್ಚ್ 31ರಂದು ಬೆಳಗ್ಗೆ 9ಕ್ಕೆ ಆರೋಗಣ ಬಲಿ, ಮಧ್ಯಾಹ್ನ 1ರಿಂದ ಶ್ರೀ ದೇವರ ಸನ್ನಿಧಿಯಿಂದ ಹಸಿರುವಾಣಿ ಹೊರೆಕಾಣಿಕೆ-ಫಲಕಾಣಿಕೆಗಳ ಮಹಾಮೆರವಣಿಗೆ ನಡೆಯಲಿದ್ದು, ರಾತ್ರಿ 9ಕ್ಕೆ ಒರಿ ಬಲಿ ಉತ್ಸವ ನಡೆಯಲಿದೆ. ಏ.1ರಂದು ರಾತ್ರಿ 9.30ಕ್ಕೆ ಅಂಬೊಡಿ ಜಾತ್ರೆ, ಅಂಬೊಡಿ ಉತ್ಸವ ಬಲಿ ನಡೆಯಲಿದೆ. ಏ.2ರಂದು ನಂದಳಿಕೆ ಅಯನೋತ್ಸವ ಸಿರಿಜಾತ್ರಾ ಮಹೋತ್ಸವ ನಡೆಯಲಿದೆ. ಅಂದು ಬೆಳಗ್ಗೆ 8ರಿಂದ ಶ್ರೀಗಂಧದ ರಜತಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಡೆಯವರ ಆಗಮನದ ಪರಂಪರಾಗತ ಅದ್ದೂರಿಯ ಮೆರವಣಿಗೆ, ರಾತ್ರಿ 10ರಿಂದ ಅಯನೋತ್ಸವ ಬಲಿ, ವೈಭವೋಪೇತ ಕೆರೆ ದೀಪೋತ್ಸವ, ರಾತ್ರಿ 11ರಿಂದ ಸತ್ಯದ ಸಿರಿಗಳ ಮೂಲ ಕ್ಷೇತ್ರ ಆಲಡೆ ಸನ್ನಿಧಿಯಲ್ಲಿ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿಜಾತ್ರೆ, ಪ್ರಾಚೀನ ವಿಧಿ ವೈಭವಗಳೊಂದಿಗೆ ನಡೆಯಲಿವೆ ಎಂದು ಅವರು ತಿಳಿಸಿದರು.

ಜೀರ್ಣೋದ್ಧಾರದ ಅಂಗವಾಗಿ ಮಾರ್ಚ್ 30ರಂದು ಬೆಳಿಗ್ಗೆ 11ಗಂಟೆಗೆ ಶ್ರೀ ಸೋದೆ ಮಠದ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಗಳ ದಿವ್ಯಹಸ್ತದಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿ ಪಾಡಿಗಾರರು ಶ್ರೀ ಶ್ರೀನಿವಾಸ ತಂತ್ರಿಯವರ ಉಪಸ್ಥಿತಿಯಲ್ಲಿ ಎಲ್ಲಾ ಭಕ್ತರು ಸೇರಿ ದೇವರಲ್ಲಿ ಪ್ರಾರ್ಥಿಸಿ ಮುಷ್ಠಿ ಕಾಣಿಕೆ ಸಮರ್ಪಿಸಲಾಗುವುದು ಎಂದು ಸುಹಾಸ್ ಹೆಗ್ಡೆ ತಿಳಿಸಿದರು. ಈ ಸಂದರ್ಭದಲ್ಲಿ ಮುಷ್ಟಿ ಕಾಣಿಕೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ವ್ಯವಸ್ಥಾಪಕ ಪಿ. ರವಿರಾಜ್ ಭಟ್, ಸುಬ್ರಹ್ಮಣ್ಯ ಭಟ್, ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ವಿ.ಕೆ ರಾವ್ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.