ಸುರತ್ಕಲ್, ಮಾ.13: ಹೊಸಬೆಟ್ಟು ಪರಿಸರದ ಗ್ಯಾರೇಜ್ ಒಂದರಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಲಾರಿ ಚಾಲಕನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಜಸ್ಥಾನದ ಜೋಧ್‌ಪುರ ಮೂಲದ ಹಾಗೂ ಸದ್ಯ ಬೆಂಗಳೂರಿನ ಬನಶಂಕರಿ ನಿವಾಸಿಯಾಗಿರುವ ಮುಖೇಶ್ ದಾಸ್ (46) ಎಂದು ಗುರುತಿಸಲಾಗಿದೆ.
ಫೆಬ್ರವರಿ 14ರಂದು ರಾತ್ರಿ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ “ಫ್ರೆಂಡ್ಸ್ ಗ್ಯಾರೇಜ್” ಆವರಣದಲ್ಲಿ ದುರಸ್ತಿಗಾಗಿ ಎರಡು ಘನ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಆರೋಪಿಯು ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿ ತನ್ನ ಲಾರಿಯಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದ. ಈ ಕುರಿತು ಗ್ಯಾರೇಜ್ ಮಾಲೀಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ₹96,000 ಮೌಲ್ಯದ ಕಳವು ಮಾಡಿದ ಬಿಡಿಭಾಗಗಳು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು ₹15 ಲಕ್ಷ ಮೌಲ್ಯದ ಈಚರ್ ಲಾರಿ (KA-02-AM-2335) ವಶಪಡಿಸಿಕೊಳ್ಳಲಾಗಿದೆ.
ಒಟ್ಟು ₹15,96,000 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


