ಉಡುಪಿ: ಮಳೆಗಾಲದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಂದು ಬೆಳಿಗ್ಗೆ ಠಾಣಾ ವ್ಯಾಪ್ತಿಯ ದೇವಸ್ಥಾನಗಳ ಮುಖ್ಯಸ್ಥರೊಂದಿಗೆ ಜಾಗೃತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಠಾಣಾ ಉಪನಿರೀಕ್ಷಕರಾದ ನಿರಂಜನ್ ಗೌಡ ಬಿ.ಎಸ್. ವಹಿಸಿದ್ದರು. ತನಿಖಾ ಪಿಎಸ್‌ಐ ಚಂದ್ರಕಲಾ ಪತ್ತಾರ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ದೇವಸ್ಥಾನಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಈ ಕೆಳಗಿನ ಸಲಹೆ-ಸೂಚನೆಗಳನ್ನು ನೀಡಲಾಯಿತು:
ದೇವಸ್ಥಾನಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ದಿನಾಂಕ ಮತ್ತು ಸಮಯ ಸರಿಯಾಗಿ ದಾಖಲಾಗುವಂತೆ ಹಾಗೂ ಕನಿಷ್ಠ 60 ದಿನಗಳ ವಿಡಿಯೊ ಸಂಗ್ರಹಣೆಯ ವ್ಯವಸ್ಥೆ ಇರಬೇಕು. DVR ಅನ್ನು ಸಾರ್ವಜನಿಕರ ಕಣ್ಣಿಗೆ ಕಾಣದ ಸ್ಥಳದಲ್ಲಿ ಇರಿಸಬೇಕು.
ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಇತರೆ ದೇವಸ್ಥಾನಗಳಲ್ಲಿ ವಾರಕ್ಕೊಮ್ಮೆ ಕಾಣಿಕೆ ಹುಂಡಿಯ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಬೇಕು.ಪ್ರತಿದಿನದ ಪೂಜೆ ಮುಗಿದ ಬಳಿಕ ಬೆಲೆಬಾಳುವ ವಸ್ತುಗಳು ಹಾಗೂ ಆಭರಣಗಳನ್ನು ದೇವಸ್ಥಾನದಲ್ಲಿ ಇರಿಸದೆ ಸುರಕ್ಷಿತ ಲಾಕರ್‌ನಲ್ಲಿ ಸಂಗ್ರಹಿಸಬೇಕು.
ಸಾಧ್ಯವಾದಷ್ಟು ಇ-ಹುಂಡಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.
ದೇವಸ್ಥಾನಗಳಲ್ಲಿ ಕಾವಲುಗಾರರನ್ನು ನೇಮಿಸಿ, ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು.ದೈವದ ಮನೆಗಳಲ್ಲಿಯೂ ಸುರಕ್ಷಿತ ಬೀಗದ ವ್ಯವಸ್ಥೆ ಮಾಡಿ, ಕಾಣಿಕೆ ಹುಂಡಿಗಳನ್ನು ದೀರ್ಘಕಾಲ ತೆರೆಯದೆ ಇರಿಸದೆ ನಿಯಮಿತವಾಗಿ ಪರಿಶೀಲಿಸಬೇಕು.ದೇವಸ್ಥಾನದ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಯಿತು.
ಸಭೆಯಲ್ಲಿ ದೇವಸ್ಥಾನಗಳ ಭದ್ರತೆ ಹಾಗೂ ಕಳ್ಳತನ ತಡೆಗಟ್ಟುವ ಕುರಿತು ಸಮಗ್ರ ಜಾಗೃತಿ ಮೂಡಿಸಲಾಗಿದ್ದು, ಎಲ್ಲ ದೇವಸ್ಥಾನಗಳ ಮುಖ್ಯಸ್ಥರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು.




