ಉಡುಪಿ: ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆ ಉಂಟಾಗುವುದಾಗಿ ವೈದ್ಯಕೀಯ ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ತಂಬಾಕುಮುಕ್ತ ಪ್ರದೇಶವನ್ನಾಗಿಸಿ ಘೋಷಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಜೂ.30) ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಕೊಟ್ಪಾ-2003ರ ಕಾಯಿದೆ ಕುರಿತ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.
ತಂಬಾಕು ಉತ್ಪನ್ನಗಳಿಂದ ದೂರವಿದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಈ ಕುರಿತು ಜಿಲ್ಲೆಯಲ್ಲಿ ಕೆಲವು ಗ್ರಾಪಂ, ಗ್ರಾಮ, ಬಹುಮಹಡಿ ವಸತಿ ಸಮುಚ್ಚಯವನ್ನು ತಂಬಾಕುಮುಕ್ತ ಪ್ರದೇಶವೆಂದು ಅಧಿಕೃತ ಘೋಷಣೆ ಮಾಡಲಾಗಿದೆ. ಉಳಿದ ಕಡೆಗಳಲ್ಲಿಯೂ ಸಹ ಸಾರ್ವಜನಿಕರಲ್ಲಿ ತಂಬಾಕು ಉತ್ಪನ್ನ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯ ಶಾಲಾ&ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಹೀಗಾಗಿ ಶಾಲಾ ಪರಿಮಿತಿಯಲ್ಲಿರುವ ಅಂಗಡಿಯವರು ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ. ತಂಬಾಕು ಮುಕ್ತ ಮಾರಾಟ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಅಧಿಕಾರಿಗಳು ಪರಿಶೀಲಿಸಿದ ಬಳಿಕವೇ ಪ್ರಮಾಣ ಪತ್ರ ನೀಡಬೇಕು ಎಂದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠ ಸುಧಾಕರ್ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ, ತಾಲೂಕಿನ ಎಲ್ಲ ಆರೋಗ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ 33ಕ್ಕೂ ಹೆಚ್ಚು ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ, ಸೆಕ್ಷನ್ 4, ಸೆಕ್ಷನ್ 6(ಎ) ಹಾಗೂ 6(ಬಿ) ಅಡಿಯಲ್ಲಿ ಒಟ್ಟು 245 ಪ್ರಕರಣ ದಾಖಲಿಸಿದ್ದು 70 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿಯೂ ಸಹ ಕೊಟ್ಪಾ ಕಾಯಿದೆ ಉಲ್ಲಂಘಿಸಿದ 31 ಪ್ರಕರಣಗಳಿಂದ 3,300 ರೂ. ದಂಡ ವಸೂಲಿ ಮಾಡಲಾಗಿದೆ.
ಜಿಲ್ಲಾದ್ಯಂತ ದಿಢೀರ್ ದಾಳಿಗಳನ್ನು ಹೆಚ್ಚಿಸಿ ಕೊಟ್ಪಾ ಕಾಯಿದೆಯ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.




