ಪಡುಬಿದ್ರಿ: ಏಪ್ರಿಲ್ 18 ರಂದು ರಾತ್ರಿ 7:45 ಗಂಟೆ ಸುಮಾರಿಗೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರಿ ಶ್ರೀ ನಾರಾಯಣ ಗುರು ಮಂದಿರದ ಸಮೀಪ ನಡೆದ ಬೈಕ್ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.
ಮುಲ್ಕಿ ಕಾರ್ನಾಡಿನ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರು ತಮ್ಮ ತಮ್ಮನಿಗೆ ಸೇರಿದ KA19EH6946 ಸಂಖ್ಯೆ ಹೊಂದಿದ Yamaha FZ ಮೋಟಾರ್ ಸೈಕಲ್ ಅನ್ನು ಮಂದಿರದ ಬಳಿ ನಿಲ್ಲಿಸಿ ರಸ್ತೆ ಬದಿಯಲ್ಲಿದ್ದ ಕ್ಯಾಂಟೀನ್‌ಗೆ ತೆರಳಿದ್ದರು. ಬಳಿಕ ವಾಪಸು ಬಂದು ನೋಡಿದಾಗ ಬೈಕ್ ಕಣ್ಮರೆಯಾಗಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್. ವಿಜಯಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ, ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಶಕ್ತಿವೇಲು ಮತ್ತು ಅನಿಲ್ ಕುಮಾರ್ ಟಿ ನಾಯಕ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಯಿತು.
ತನಿಖೆಯ ಫಲವಾಗಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ನಿವಾಸಿ ಮಂಜುನಾಥ ಫಕೀರಪ್ಪ ವಾಲಿಕಾರನನ್ನು ವಶಕ್ಕೆ ಪಡೆದು, ಆತನಿಂದ ರೂ. 20,000 ಮೌಲ್ಯದ ಕಳವುಗೊಳಗಾದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ರಾಜೇಶ್ ಪಿ, ಹೆಡ್ ಕಾನ್ಸ್‌ಟೇಬಲ್ ಕೃಷ್ಣಪ್ರಸಾದ್, ಅಶ್ವಿನ್ ಕುಮಾರ್ ಹಾಗೂ ಪಿಸಿ ಸಂದೇಶ್ ಭಂಡಾರಿ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





