ಕುಂದಾಪುರ, ಮಾ.12: ಬಗ್ವಾಡಿ ಸೇತುವೆ ಕೆಳಗೆ ಚಕ್ರಾ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಭಾಸ್ಕರ ಪೂಜಾರಿ (65) ಎಂದು ಗುರುತಿಸಲಾಗಿದೆ.
ಕೊಡ್ಲಾಡಿ ಮನೆ, ನೂಜಾಡಿ ಗ್ರಾಮದ ಗೋವಿಂದ ಪೂಜಾರಿ (64) ಅವರ ಅಣ್ಣನಾದ ಭಾಸ್ಕರ ಪೂಜಾರಿ ಅವರು ಹುಬ್ಬಳ್ಳಿಯ ಗೋಕುಲ್ ರೋಡ್‌ನ ಆರ್.ಎಂ. ಲೋಹಿಯಾ ನಗರದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು.
ದಿನಾಂಕ 11-03-2026 ರಂದು ಬೆಳಿಗ್ಗೆ ಸುಮಾರು 6 ಗಂಟೆ ಸುಮಾರಿಗೆ ಶುಗರ್ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅವರು ಬಳಿಕ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಅವರ ಮಗಳು ಸುವರ್ಣ ಅವರು ಸಂಬಂಧಿಕರಿಗೆ ಮಾಹಿತಿ ನೀಡಿದ್ದರು.
12-03-2026 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ದೇವಲ್ಕುಂದ ಗ್ರಾಮದ ಬಗ್ವಾಡಿ ಸೇತುವೆ ಕೆಳಗೆ ಚಕ್ರಾ ನದಿಯಲ್ಲಿ ಒಂದು ಮೃತದೇಹ ತೇಲುತ್ತಿರುವುದಾಗಿ ರವೀಂದ್ರ ಮೊಗವೀರ ಅವರು ಮಾಹಿತಿ ನೀಡಿದ್ದರು.
ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಭಾಸ್ಕರ ಪೂಜಾರಿಯವರ ಶವವೆಂದು ಗುರುತಿಸಲಾಗಿದೆ. ಸೇತುವೆಯ ಮೇಲೆ ಅವರ ಚಪ್ಪಲಿ ಕೂಡ ಪತ್ತೆಯಾಗಿದೆ.
ಮೃತ ಭಾಸ್ಕರ ಪೂಜಾರಿಯವರಿಗೆ ಬಿಪಿ, ಶುಗರ್ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದು, ಈ ಕುರಿತು ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬೇಸರಗೊಂಡು ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


