ಬೈಂದೂರು: ಶತಮಾನದ ಇತಿಹಾಸ ಹೊಂದಿರುವ ಬೈಂದೂರಿನ ಪ್ರಸಿದ್ಧ ನಾಕಟ್ಟೆಮನೆ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ ನಾಕಟ್ಟೆಯಲ್ಲಿ ಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು .
ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನಾಕಟ್ಟೆಮನೆ ಹೆಬ್ಬಾಗಿಲನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಕರಾವಳಿಯ ಅನೇಕ ಹಿರಿಯ ಮನೆತನಗಳು ತಮ್ಮ ಸಂಪ್ರದಾಯ, ಧಾರ್ಮಿಕ ಆಚರಣೆ ಹಾಗೂ ಕುಟುಂಬ ಮೌಲ್ಯಗಳ ಮೂಲಕ ಸಮಾಜದ ಹಿರಿಮೆಯನ್ನು ಜಗದಗಲ ಪಸರಿಸುತ್ತಿವೆ ಎಂದು ಹೇಳಿದರು.

ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಮನೆತನದ ಧಾರ್ಮಿಕ ಹಿನ್ನೆಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವುದು ಕುಟುಂಬದ ಗೌರವವನ್ನು ಹೆಚ್ಚಿಸಿದೆ. ಹೆಬ್ಬಾಗಿಲು ಎಂದರೆ ಮನೆತನದ ಗೌರವದ ಸಂಕೇತವಾಗಿದ್ದು, ಬೈಂದೂರಿನ ನಾಕಟ್ಟೆ ಕುಟುಂಬ ಈ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಊರಿಗೆ ಕೀರ್ತಿಯ ಸಂಗತಿಯಾಗಿದೆ ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ನಾಕಟ್ಟೆ ಕುಟುಂಬದ ಆನಂದ ಎನ್. ಶೆಟ್ಟಿ ಮಾತನಾಡಿ, ನಾಕಟ್ಟೆ ಹೆಬ್ಬಾಗಿಲುಮನೆ ದಾನಧರ್ಮ ಹಾಗೂ ಆತಿಥ್ಯಕ್ಕೆ ಪ್ರಸಿದ್ಧವಾಗಿತ್ತು ಎಂದರು. ಹಲವು ದಶಕಗಳ ಹಿಂದೆ ಶಿರಸಿ, ಕುಂದಾಪುರ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುವ ಜನರಿಗೆ ಈ ಮನೆ ಆಶ್ರಯವಾಗಿತ್ತು. ರಾತ್ರಿ ವೇಳೆ ಬಸ್ ಸೌಲಭ್ಯ ಇಲ್ಲದ ಕಾಲದಲ್ಲಿ ಪ್ರಯಾಣಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದ ಮಾನವೀಯ ಮನೆಯಾಗಿತ್ತು ಎಂದು ಸ್ಮರಿಸಿದರು.
ಅನೇಕ ಜನರ ಬದುಕಿನಲ್ಲಿ ಈ ಮನೆ ಮರೆಯಲಾಗದ ನೆನಪುಗಳನ್ನು ಮೂಡಿಸಿದ್ದು, ಇದೀಗ ಪುನರುಜ್ಜೀವನಗೊಂಡಿರುವ ಹೆಬ್ಬಾಗಿಲು ಮನೆ ಹಳೆಯ ಸುವರ್ಣ ಕ್ಷಣಗಳನ್ನು ಮತ್ತೆ ನೆನಪಿಸುವಂತಾಗಿದೆ. ನಿನ್ನೆ ನಡೆದ ಅದ್ದೂರಿ ಉದ್ಘಾಟನೆ ಕಾರ್ಯಕ್ರಮ ಎಲ್ಲರ ಮನಸ್ಸಿನಲ್ಲಿ ಸಂತಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಾಕಟ್ಟೆ ಕುಟುಂಬದ ಶ್ರೀಮತಿ ನೂತನ ಆನಂದ ಶೆಟ್ಟಿಯವರ ಪುತ್ರ ಮಂದಾರ ಎ. ಶೆಟ್ಟಿಯನ್ನು ಸ್ವಾಮೀಜಿಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವತ್ತಿನಣೆ ರಾಘವೇಂದ್ರ ಸ್ವಾಮಿ ಮಠ (ಕಿರುಮಂತ್ರಾಲಯ) ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಬೈಂದೂರು ಯಡ್ತರೆಯ ಕೋಟಿ-ಚೆನ್ನಯ್ಯ ಗರಡಿಯ ಅಧ್ಯಕ್ಷ ಎಸ್. ರಾಜು ಪೂಜಾರಿ, ಶ್ರೀ ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಾಕಟ್ಟೆ, ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ನಾಗರಾಜ ಶೆಟ್ಟಿ ನಾಕಟ್ಟೆ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಸುಧಾಕರ ಶೆಟ್ಟಿ ಇಂದ್ರಾಳಿ, ಡಿಯರ್ ಕನ್ಸ್ಟ್ರಕ್ಷನ್ ಹುಬ್ಬಳ್ಳಿಯ ಕೆ.ಆರ್. ಶೆಟ್ಟಿ, ಆರ್.ಎನ್. ಶೆಟ್ಟಿ ಕಂಪನಿ ಹುಬ್ಬಳ್ಳಿ ನಿರ್ದೇಶಕ ಕೆ. ಆನಂದ ಶೆಟ್ಟಿ ಸೇರಿದಂತೆ ನಾಕಟ್ಟೆಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು.

ನಾಗರಾಜ್ ಎನ್. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸುಧಾಕರ್ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು.




