Home Crime ಮರವಂತೆಯ ಮಾಂಗಲ್ಯ ಚಿನ್ನದ ಅಂಗಡಿಯಲ್ಲಿ ಕಳ್ಳತನ; 1.45 ಲಕ್ಷ ರೂ. ಮೌಲ್ಯದ ಬೆಳ್ಳಿ, ನಗದು ದೋಚಿದ...

ಮರವಂತೆಯ ಮಾಂಗಲ್ಯ ಚಿನ್ನದ ಅಂಗಡಿಯಲ್ಲಿ ಕಳ್ಳತನ; 1.45 ಲಕ್ಷ ರೂ. ಮೌಲ್ಯದ ಬೆಳ್ಳಿ, ನಗದು ದೋಚಿದ ಕಳ್ಳರು

ಗಂಗೊಳ್ಳಿ, ಜು. 6: ಬೈಂದೂರು ತಾಲೂಕಿನ ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್‌ನಲ್ಲಿರುವ ಮಾಂಗಲ್ಯ ಚಿನ್ನದ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹1.45 ಲಕ್ಷ ಮೌಲ್ಯದ ಬೆಳ್ಳಿಗಟ್ಟಿ ಹಾಗೂ ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಮರವಂತೆ ಗ್ರಾಮದ ಹರಿಶ್ಚಂದ್ರ ರಸ್ತೆಯ ಚಳ್ಳಿಕಳ್ಳಿ ನಿವಾಸಿ ವಿಶ್ವನಾಥ್ (35) ಅವರು ನೀಡಿದ ದೂರಿನ ಪ್ರಕಾರ, ಜುಲೈ 4ರಂದು ರಾತ್ರಿ 9 ಗಂಟೆಯಿಂದ ಜುಲೈ 5ರಂದು ಬೆಳಿಗ್ಗೆ 5.40 ಗಂಟೆಯ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಅಂಗಡಿಯ ಶಟರ್ ಮುರಿದು ಒಳನುಗ್ಗಿದ್ದಾರೆ. ಬಳಿಕ ಅಂಗಡಿಯ ಡ್ರಾವರ್ ಹಾಗೂ ಕ್ಯಾಬಿನ್‌ನಲ್ಲಿದ್ದ ಸುಮಾರು 600 ಗ್ರಾಂ ಬೆಳ್ಳಿಗಟ್ಟಿ (ಅಂದಾಜು ಮೌಲ್ಯ ₹1,44,000) ಹಾಗೂ ₹1,000 ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 31/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(4) ಮತ್ತು 305 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.