ಉಡುಪಿ : ಜಿಲ್ಲೆಯಲ್ಲಿ ಡ್ರಗ್ಸ್ ವಿರೋಧಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಪೊಲೀಸರು, ಕಾಪು ತಾಲೂಕಿನ ಪಾದೂರಿನಲ್ಲಿ ಭರ್ಜರಿ ದಾಳಿ ನಡೆಸಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಪು ದರ್ಗಾ ಸಮೀಪದ ನಿವಾಸಿಯಾಗಿರುವ ಜಹೀರ್ ಅಹ್ಮದ್ ಬಂಧಿತ ಪ್ರಮುಖ ಆರೋಪಿ. ಈತನಿಗೆ ಸಹಕರಿಸುತ್ತಿದ್ದ ಸೈಯದ್ ಶಮೀರ್ ಎಂಬಾತನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಹೀರ್ ಅಹ್ಮದ್ ಸ್ಥಳೀಯವಾಗಿ ಕಾಂಗ್ರೆಸ್ ಮುಖಂಡನಾಗಿ ಗುರುತಿಸಿಕೊಂಡಿದ್ದು, ಈತನ ಬಂಧನ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಖಚಿತ ಮಾಹಿತಿಯ ಮೇರೆಗೆ ಕಾಪು ತಾಲೂಕಿನ ಪಾದೂರು ಎಂಬಲ್ಲಿ ಶಿರ್ವ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮಾದಕ ವಸ್ತುವನ್ನು ಮಾರಾಟ ಮಾಡಲು ಅಥವಾ ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳಿಂದ 2.83 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಬಂಧಿತ ಜಹೀರ್ ಅಹ್ಮದ್ ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಹಿರಿಯ ನಾಯಕರ ಜೊತೆಗಿರುವ ಈತನ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಬಂಧನವು ಜಿಲ್ಲಾ ಕಾಂಗ್ರೆಸ್‌ಗೆ ಮುಜುಗರ ತಂದಿದ್ದು, ಮಾದಕ ವಸ್ತು ಜಾಲದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಉಡುಪಿ ಜಿಲ್ಲೆಯನ್ನು ಡ್ರಗ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಕೋರಿದ್ದಾರೆ.



