ಮಲ್ಪೆ: ಉಡುಪಿ ತಾಲೂಕಿನ ಕೊಡವೂರು ಗ್ರಾಮದ 71 ವರ್ಷದ ಶಾಂತ ಬೆಳ್ಚಡ ಅವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರ ಪುತ್ರಿ ಕುಸುಮಾ ಜಯಾ ಪಾಲನ್ ಅವರು ಬೆಳಿಗ್ಗೆ ತಾಯಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ನೆರೆಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮನೆಗೆ ತೆರಳಿ ಪರಿಶೀಲಿಸಿದಾಗ ಶಾಂತ ಬೆಳ್ಚಡ ಅವರು ಮನೆಯಲ್ಲಿ ಇಲ್ಲದಿರುವುದು ಕಂಡುಬಂದಿದೆ. ಮನೆಯ ಪಕ್ಕದ ಬಾವಿಯ ಬಳಿ ಸೀರೆ ಕಾಣಿಸಿಕೊಂಡಿದ್ದು, ಪರಿಶೀಲಿಸಿದಾಗ ಅವರು ಬಾವಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಬಾವಿಯಿಂದ ನೀರು ಸೇದುವ ವೇಳೆ ಬಿಂದಿಗೆ ಹಾಗೂ ಹಗ್ಗವನ್ನು ಮೇಲಕ್ಕೆ ಎಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ವ್ಯಕ್ತವಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.




