ಕಾರ್ಕಳ: ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಹಾಗೂ ಸಮಾಜವನ್ನು ಜಾಗೃತಗೊಳಿಸುವಲ್ಲಿ ಪತ್ರಿಕಾಮಾಧ್ಯಮದ ಪಾತ್ರ ಮಹತ್ತರವಾದದ್ದು ಎಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಪೂರ್ ಹೇಳಿದರು.
ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ಇದರ ನೇತೃತ್ವದಲ್ಲಿ ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಯೋಗದಲ್ಲಿ ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮವು ತಂತ್ರಜ್ಞಾನದ ಜೊತೆಗೆ ವೇಗವಾಗಿ ಬೆಳೆದಿದೆ. ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ಸುಳ್ಳು ಸುದ್ದಿಗಳ ಹಾವಳಿಯೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ವಸ್ತುನಿಷ್ಠ ಮತ್ತು ಸತ್ಯವಾದ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಅತಿ ದೊಡ್ಡ ಸವಾಲಾಗಿದೆ. ಜರ್ಮನಿಯಿಂದ ಆಗಮಿಸಿ ಕರಾವಳಿಯ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ, ಇಲ್ಲಿನ ಸ್ಥಳೀಯ ಭಾಷೆಯನ್ನು ಕಲಿತು ಪತ್ರಿಕಾರಂಗವನ್ನು ಹುಟ್ಟುಹಾಕಿದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಇಂದಿನ ಪತ್ರಿಕೋದ್ಯಮಕ್ಕೆ ಬಲವಾದ ಬುನಾದಿಯಾಗಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಇಂದು ‘ಬ್ರೇಕಿಂಗ್ ನ್ಯೂಸ್’ ನೆಪದಲ್ಲಿ ಟಿವಿ ಹಾಗೂ ಮೊಬೈಲ್ ಪರದೆ ಮೇಲೆ ಬರುವ ಸುದ್ದಿಗಳು ಸತ್ಯ-ಸುಳ್ಳುಗಳ ಗೊಂದಲಕ್ಕೆ ಈಡಾಗಬಹುದು. ಡಿಜಿಟಲ್ ಮಾಧ್ಯಮದಲ್ಲಿ ಸುಳ್ಳು ಸುದ್ದಿಯನ್ನು ಅಳಿಸಬಹುದು ಅಥವಾ ಅಡಗಿಸಬಹುದು. ಆದರೆ, ಮುದ್ರಣ ಪತ್ರಿಕೆಗಳಲ್ಲಿ ಅದು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಆಳವಾದ ಸತ್ಯಶೋಧನೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಪತ್ರಿಕಾರಂಗ ಮತ್ತೆ ಶಕ್ತಿಯುತವಾಗಿ ಭುಗಿದೇಳುತ್ತಿರುವುದು ಸಮಾಧಾನಕರ ಸಂಗತಿ ಎಂದರು. ದೇಶದ ಭವಿಷ್ಯ ನಿರ್ಮಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗವಾದ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಆದರೆ, ಈ ನಾಲ್ಕನೇ ಸ್ತಂಭದ ಸ್ವರೂಪ ಕೆಲವೊಮ್ಮೆ ಬದಲಾಗಿ ಸ್ತಂಭವೇ ಬಾಗುತ್ತಿರುವುದು ವಿಷಾದನೀಯ. ಹೀಗಾಗಿ ಪತ್ರಿಕಾ ಮಾಧ್ಯಮ ಜಾಗೃತವಾಗಬೇಕು. ಪತ್ರಿಕೆಗಳಿಗೂ ವಿದ್ಯಾರ್ಥಿಗಳಿಗೂ ನಿಕಟ ಸಂಬಂಧವಿದ್ದು, ಭಾಷೆ ಮತ್ತು ಜ್ಞಾನದ ಜೊತೆಗೆ ಸಾಮಾಜಿಕ, ವೈಜ್ಞಾನಿಕ ಹಾಗೂ ವೈಚಾರಿಕತೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಪತ್ರಿಕೆಗಳಿಂದ ಆಗುತ್ತಿದೆ ಎಂದು ನಕ್ರೆ ಕಿವಿಮಾತು ಹೇಳಿದರು.
ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಗಣಪತಿ ಕೆ. ಎಸ್. ಮಾತನಾಡಿ, ಪತ್ರಕರ್ತರು ಸಮಾಜ ಮತ್ತು ಸರಕಾರದ ಮಧ್ಯೆ ಬೆಸುಗೆ ಮೂಡಿಸುತ್ತಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಹ್ಮಣ್ಯ ಕುರ್ಯ ಮಾತನಾಡಿ, ಬದುಕಿನ ಅರಿವು, ಜ್ಞಾನವೃದ್ದಿ ಜಾಗ್ರತಿಗಾಗಿ ಪತ್ರಿಕೆ ಓದುವುದು ಅವಶ್ಯ. ಓದುವ ಅಭಿರುಚಿ ಹೆಚ್ಚಲಿ ಎಂದು ಹಾರೈಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ರಾಜ್ಯ ಸಮಿತಿ ಸದಸ್ಯ ಅಸ್ಟ್ರೊ ಮೋಹನ್ ಮಾತನಾಡಿ, ನಾವೀಗ ನವಮಾಧ್ಯಮ ಬಂದ ಮೇಲೆ ಹಿಟ್ ಆ್ಯಂಡ್ ರನ್ ಪ್ರಕರಣ ಹೆಚ್ಚುತ್ತಿದೆ. ಬರವಣಿಗೆ ಮಾತ್ರ ಮಾನ್ಯತೆ ಪಡೆಯುತ್ತವೆ. ನಮ್ಮಲ್ಲಿ ಕಲ್ಪನಾ ಶಕ್ತಿ ಹೆಚ್ಚಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾರ್ಯನಿರತ ಪತ್ರಕರ್ತದ ಸಂಘದ ತಾಲೂಕು ಅಧ್ಯಕ್ಷ ಮೊಹಮ್ಮದ್ ಶರೀಪ್ ಮಾತನಾಡಿ, ಯಾವುದೇ ರಂಗದಲ್ಲಿ ಇದ್ದರೂ ನಿಷ್ಠೆ ಮುಖ್ಯ. ಪತ್ರಕರ್ತರು ಸವಾಲುಗಳನ್ನು ಎದುರಿಸಿ ಸಮಾಜದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ವರದಿಗಾರ ವಾಸುದೇವ ಭಟ್ ಪ್ರಸ್ತಾವನೆಗೈದು, ಪ್ರತಿ ಜುಲೈ ತಿಂಗಳ 1ರಂದು ಪತ್ರಿಕಾ ದಿನಾಚರಣೆ ನಡೆಸಲಾಗುತ್ತದೆ. ಪತ್ರಿಕಾ ಸುದ್ದಿಯಲ್ಲಿ ಇಂಚಿಗೂ ಬೆಲೆ ಇರುತ್ತದೆ. ರಂಜಿಕತೆ ಇರುವುದಿಲ್ಲ. ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೆ ಪ್ರಧಾನ ಸ್ತಂಬವಾಗಿದೆ. ಪತ್ರಿಕೆಗಳು ಸರಕಾರಿ ಸೌಲಭ್ಯಗಳನ್ನು ಜನರಿಗೆ ತಿಳಿಸುವುದು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆ ಅಲ್ಪ ಮನೊರಂಜನೆ ನೀಡುತ್ತವೆ ಎಂದರು. ಮುಂದುವರೆದ ಯುಗದಲ್ಲಿ ತಾಂತ್ರಿಕ ಪ್ರಭಾವ, ಕೃತಕ ಬುದ್ದಿಮತ್ತತೆಯಿಂದ ಹೊಸ ತಂತ್ರಜ್ಞಾನಗಳು ಬಂದಿವೆ ಎಂದರು.
ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ಥ್ ಎಸ್.ಎಲ್ ಅವರನ್ನು ಗೌರವಿಸಲಾಯಿತು. ಅವರ ಪರವಾಗಿ ಸಹಸಂಸ್ಥಾಪಕ ಗಣಪತಿ ಕೆ.ಎಸ್ ಗೌರವ ಸ್ವೀಕರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ
ಹರೀಶ್ ಸಚ್ಚರಿಪೇಟೆ, ಕೋಶಾಧಿಕಾರಿ ಸತೀಶ್ ಶೆಟ್ಟಿ ವಾಮದಪದವು ವೇದಿಕೆಯಲ್ಲಿದ್ದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಮುಂಡ್ಕೂರು ಸ್ವಾಗತಿಸಿದರು.
ಕ್ರಿಯೆಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಜ್ಞಾ ರಾವ್ ಎಂ, ಶಿಥಿಲ್ ಎಸ್ ಶೆಟ್ಟಿ, ಸಮೀಕ್ಷಾ, ಐಪುನ್ ಮರಿಯಂ ಫಾತಿಮ, ತನಿಷ್ ಕುಮಾರ್, ಇವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಹರೀಶ್ ಆಚಾರ್ಯ ಹೆಸರು ವಾಚಿಸಿದರು.
ಚೈತ್ರಾ ಕಬ್ಬಿನಾಲೆ ನಿರೂಪಿಸಿ, ಅವಿನ್ ಶೆಟ್ಟಿ ವಂದಿಸಿದರು.







