ಹಿರಿಯಡ್ಕ, ಜೂನ್ 23: ಆನ್‌ಲೈನ್‌ನಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಮಹಿಳೆಯೊಬ್ಬರಿಗೆ ₹3.50 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀಲಾವತಿ ಎಂಬವರ ಮೊಬೈಲ್‌ಗೆ ಸುಮಾರು ಎರಡು ತಿಂಗಳ ಹಿಂದೆ ಅಪರಿಚಿತರು Stake JP ವೆಬ್‌ಸೈಟ್‌ನ ಲಿಂಕ್ ಕಳುಹಿಸಿ, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ದೊರೆಯುತ್ತದೆ ಎಂದು ನಂಬಿಸಿದ್ದಾರೆ. ಆರೋಪಿಗಳ ಮಾತು ನಂಬಿದ ಅವರು, ನೀಡಲಾದ ಲಿಂಕ್‌ನ್ನು ತೆರೆಯುವ ಮೂಲಕ ಹಂತ ಹಂತವಾಗಿ ಒಟ್ಟು ₹4,02,000 ಹಣವನ್ನು ಡಿಪಾಸಿಟ್ ಮಾಡಿದ್ದಾರೆ.
ಆರಂಭದಲ್ಲಿ ನಂಬಿಕೆ ಮೂಡಿಸುವ ಉದ್ದೇಶದಿಂದ ಆರೋಪಿಗಳು ಸ್ವಲ್ಪ ಹಣವನ್ನು ಹಿಂದಿರುಗಿಸಿದ್ದು, ಬಳಿಕ ಉಳಿದ ಹಣವನ್ನು ವಾಪಸ್ ನೀಡದೇ ಸುಮಾರು ₹3,50,000 ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶೀಲಾವತಿ ನೀಡಿದ ದೂರಿನ ಆಧಾರದ ಮೇಲೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 42/2026ರಡಿ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಕಲಂ 66(D) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಪರಿಚಿತರಿಂದ ಬರುವ ಹೂಡಿಕೆ ಲಿಂಕ್‌ಗಳು ಹಾಗೂ ಅಧಿಕ ಲಾಭದ ಭರವಸೆ ನೀಡುವ ಆನ್‌ಲೈನ್ ಯೋಜನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




