Home Dskshina Kannada ವಿಟ್ಲ ಕೋಡಪದವಿನಲ್ಲಿ ಮಗುವಿನ ಸರಗಳ್ಳತನ…!!

ವಿಟ್ಲ ಕೋಡಪದವಿನಲ್ಲಿ ಮಗುವಿನ ಸರಗಳ್ಳತನ…!!

ಸಾಂದರ್ಭಿಕ ಚಿತ್ರ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೋಡಪದವಿನಲ್ಲಿ ಹಾಡಹಗಲೇ ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯ ಅಂಗಳದಲ್ಲಿ ನಿಶ್ಚಿಂತೆಯಿಂದ ಆಟವಾಡುತ್ತಿದ್ದ ಕಂದಮ್ಮನ ಕುತ್ತಿಗೆಗೆ ಕೈಹಾಕಿದ ದುರುಳನೋರ್ವ, ಮಗು ಧರಿಸಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಕೋಡಪದವು ಮದಕ ಎಂಬಲ್ಲಿ ಈ ಕೃತ್ಯ ನಡೆದಿದ್ದು, ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯು ಅತ್ಯಂತ ವೇಗವಾಗಿ ಮಗುವಿನ ಸರ ಅಪಹರಿಸಿ ಎಸ್ಕೇಪ್ ಆಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಮದಕ ನಿವಾಸಿಯೊಬ್ಬರ ಪುಟ್ಟ ಮಗು ಎಂದಿನಂತೆ ಮನೆಯ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿತ್ತು. ಈ ವೇಳೆ ಪರಿಸರದ ಮೇಲೆ ಕಣ್ಣಿಟ್ಟಿದ್ದ ಕಳ್ಳನು, ಯಾರು ಇಲ್ಲದ ಸಮಯ ನೋಡಿ ಕೆಟಿಎಂ ಬೈಕಿನಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಕ್ಷಣಾರ್ಧದಲ್ಲಿ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತಿದ್ದಾನೆ. ಮಗು ಗಾಬರಿಗೊಳ್ಳುವಷ್ಟರಲ್ಲಿ ಆತ ತನ್ನ ಬೈಕಿನಲ್ಲಿ ಮಿಂಚಿನ ವೇಗದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಬೈಕ್ ಸವಾರನು ಕಪ್ಪು ಹೆಲ್ಮೆಟ್ ಧರಿಸಿರುವುದು ಪತ್ತೆಯಾಗಿದೆ. ಬೈಕಿನ ವೇಗ ಮತ್ತು ಆತ ಬಂದ ಹಾದಿಯನ್ನು ಗಮನಿಸಿದರೆ, ಈತ ಮೊದಲೇ ಸಂಚು ರೂಪಿಸಿರುವ ಸಾಧ್ಯತೆ ದಟ್ಟವಾಗಿದೆ. ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಸುಳಿವು ಆದರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಾಂದರ್ಭಿಕ ಚಿತ್ರ