ಉಡುಪಿ: ಮಲ್ಪೆ ಸಮೀಪದ ಕೊಡವೂರು ಗ್ರಾಮದ ಸೀವಾಕ್ ಬಳಿ ಇರುವ ವಿಠೋಬ ಭಜನಾ ಮಂದಿರದ ಎದುರು ನಡೆದ ಹಲ್ಲೆ ಪ್ರಕರಣದಲ್ಲಿ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ದಿನಾಂಕ 24-03-2026 ರಂದು ಬೆಳಗಿನ ಜಾವ ಸುಮಾರು 3:00 ಗಂಟೆಗೆ, ಸುಧಾಕರ ಮೆಟ್ಟಾ (36) ಎಂಬಾತನು ವಿಠೋಬ ಭಜನಾ ಮಂದಿರದ ಎದುರು ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಸ್ಥಳೀಯ ನಿವಾಸಿ ಮಹೇಶ್ ಸುವರ್ಣ ಅವರು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಸುಧಾಕರ ಮೆಟ್ಟಾ ಮಹೇಶ್ ಅವರಿಗೆ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎನ್ನಲಾಗಿದೆ.
ಈ ವೇಳೆ ಮತ್ತೋರ್ವ ಆರೋಪಿ ರಾವುರಿ ಚಿನ್ನಸ್ವಾಮುಲು ಸಹ ಸೇರಿಕೊಂಡು ಇಬ್ಬರೂ ಸಮಾನ ಉದ್ದೇಶದಿಂದ ಮಹೇಶ್ ಸುವರ್ಣ ಅವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಬೆಳಗಿನ ಜಾವ ಸುಮಾರು 3:10 ಗಂಟೆಗೆ ಮನೆಗೆ ತೆರಳುತ್ತಿದ್ದ ಮಹೇಶ್ ಅವರನ್ನು ಎರಡನೇ ಆರೋಪಿ ಅಡ್ಡಗಟ್ಟಿ, ಅಂಗಿಯ ಕಾಲರ್ ಹಿಡಿದು ಎಳೆದು ಮತ್ತೆ ಭಜನಾ ಮಂದಿರದ ಬಳಿಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮೊದಲ ಆರೋಪಿ ಸುಧಾಕರ ಮೆಟ್ಟಾ ತಾನು ಕೆಲಸ ಮಾಡುತ್ತಿದ್ದ ಲಾರಿಯಲ್ಲಿ ಇದ್ದ ಜಾಕ್ ಲಿವರ್ ರಾಡ್ ತೆಗೆದುಕೊಂಡು ಮಹೇಶ್ ಅವರ ಬಲಕಾಲಿನ ಮೊಣಕಾಲಿಗೆ ಜೋರಾಗಿ ಹೊಡೆದಿದ್ದು, ಪರಿಣಾಮವಾಗಿ ಮೂಳೆ ಮುರಿತದ ಗಂಭೀರ ಗಾಯ ಉಂಟಾಗಿದೆ.
ಈ ಸಂಬಂಧ ಜಗದೀಶ್ ಶಂಕರ ಕುಂದರ್ (53), ಪುಷ್ಪ ನಿಲಯ, ಬಾಪುತೋಟ, ಕೊಡವೂರು ನಿವಾಸಿ ಅವರು ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





