Home Crime ಮೂಡುಬಿದಿರೆ: ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬಸ್ ಡಿಕ್ಕಿ – ಸ್ಕೂಟರ್ ಸವಾರ ಯುವಕ...

ಮೂಡುಬಿದಿರೆ: ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬಸ್ ಡಿಕ್ಕಿ – ಸ್ಕೂಟರ್ ಸವಾರ ಯುವಕ ಸಾವು…!!

ಮೂಡುಬಿದಿರೆ: ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದ ಸ್ಕೂಟರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಬಳಿ ನಡೆದಿದೆ.

ಘಟನೆ ವಿವರ:

ದೂರುದಾರ ಮೊಹಮ್ಮದ್ ಸಿಯಾಬುದ್ದೀನ್ (25) ಅವರು ಅ.30 ರಂದು ರಾತ್ರಿ ತಮ್ಮ ಸ್ಕೂಟರ್‌ನಲ್ಲಿ ಸ್ನೇಹಿತ ಮೊಹಮ್ಮದ್ ರಿಝ್ವಾನ್ ಜೊತೆ ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಏಕಮುಖ ರಸ್ತೆಯಲ್ಲಿ ತೋಡಾರು ಕಡೆಗೆ ಹೋಗುತ್ತಿದ್ದರು. ರಾತ್ರಿ 8:30ಕ್ಕೆ ಬಡಗ ಮಿಜಾರು ಗ್ರಾಮದ ತೋಡಾರು ಬಳಿ ಹರೀಶ್ ಅಂಗಡಿ ಸಮೀಪ ತಲುಪಿದಾಗ,

ಮಂಗಳೂರು ಕಡೆಯಿಂದ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ KA-19-AC-2699 ನಂಬರ್ ಬಸ್ ಚಾಲಕ ನಿರ್ಲಕ್ಷ್ಯದಿಂದ, ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ದೂರುದಾರರ ಮುಂದೆ ಹೋಗುತ್ತಿದ್ದ KA-19-HW-7371 ನಂಬರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಮಹಮ್ಮದ್ ರಿಫಾದ್ (21 ವರ್ಷ) ಬಸ್‌ನ ಬಲಬದಿಯ ಚಕ್ರದಡಿಗೆ ಸಿಲುಕಿ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡು ಅರೆ ಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಅವರನ್ನು ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆಗೆ ಸಾಗಿಸುವಾಗ ರಾತ್ರಿ 9 ಗಂಟೆಗೆ ಮೃತಪಟ್ಟಿದ್ದಾರೆ.

ಅಪಘಾತ ಪಡಿಸಿದ ಬಸ್ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೆ, ಪೊಲೀಸರಿಗೂ ಮಾಹಿತಿ ನೀಡದೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಬಸ್ ಚಾಲಕನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.