ಬಂಟ್ವಾಳ: ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಸಹಸವಾರ ಮೃತಪಟ್ಟಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳದ ಮಣ್ಣಾಪು ಎಂಬಲ್ಲಿ ಅಕ್ಟೋಬರ್ 30ರಂದು ರಾತ್ರಿ ನಡೆದಿದೆ.
ಮೃತರನ್ನು ಗೋಪಾಲ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಝಕಾರಿಯಾ ಗಾಯಗೊಂಡಿದ್ದಾರೆ.
ಗೋಪಾಲ ಹಾಗೂ ಝಕಾರಿಯಾ ಅವರು ಮಂಗಳೂರಿನ ಗಂಜಿಮಠದಲ್ಲಿ ಕೆಲಸ ಮುಗಿಸಿಕೊಂಡು ಕೆಎ-19-ಇಕ್ಯೂ-0201 ನೋಂದಣಿಯ ಮೋಟಾರ್ ಸೈಕಲ್ನಲ್ಲಿ ಬಿ.ಸಿ.ರೋಡು ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದರು. ರಾತ್ರಿ ಸುಮಾರು 7 ಗಂಟೆಗೆ ಬಂಟ್ವಾಳ ತಾಲೂಕು ಬಿ.ಕಸಬಾ ಗ್ರಾಮದ ಮಣ್ಣಾಪು ಎಂಬಲ್ಲಿ ತಲುಪಿದಾಗ, ಹಿಂಬದಿಯಿಂದ ಬಂದ ಕೆಎ-19-ಎಂ.ಕೆ-3965 ನೋಂದಣಿಯ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತವನ್ನು ಗಮನಿಸಿದ ಕಿರಣ್ ಮತ್ತು ಸಂದೀಪ್ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಆಟೋರಿಕ್ಷಾದಲ್ಲಿ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇಬ್ಬರನ್ನೂ ಒಳರೋಗಿಗಳಾಗಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ರಾತ್ರಿ 8.59ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಗೋಪಾಲ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರು ಚಾಲಕ ಆಪ್ರೀದ್ ಅವರ ದುಡುಕು ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



