ಮಂಗಳೂರು: ನಗರದ ಬೋಳೂರು ಗ್ರಾಮದ ಸುಲ್ತಾನ್ ಬತ್ತೇರಿ ಫೆರಿ ಪಾಯಿಂಟ್ ಪಾರ್ಕಿಂಗ್ ಬಳಿ MDMA ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 28ರಂದು ರಾತ್ರಿ ಬರ್ಕೆ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅಕ್ಟೋಬರ್ 29ರ ಮಧ್ಯರಾತ್ರಿ ಸುಮಾರು 12.25ಕ್ಕೆ ಸುಲ್ತಾನ್ ಬತ್ತೇರಿ ಫೆರಿ ಪಾಯಿಂಟ್ ಪಾರ್ಕಿಂಗ್ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಧನೇಶ್ ಎಸ್. ಕುಮಾರ್ ಅಲಿಯಾಸ್ ಧನೇಶ್ (36) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆರೋಪಿಯಿಂದ ಸುಮಾರು 43 ಸಾವಿರ ರೂ. ಮೌಲ್ಯದ 4.30 ಗ್ರಾಂ MDMA ಮಾದಕ ವಸ್ತು, 10 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಒಂದು ಲಕ್ಷ ರೂ. ಮೌಲ್ಯದ ಸ್ಕೂಟರ್ ಸೇರಿದಂತೆ ಒಟ್ಟು 1,53,000 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಆರೋಪಿಯನ್ನು ಬಂಧಿಸಿ ಬರ್ಕೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



