ಕಾಸರಗೋಡು : ನಕಲಿ ಚಿನ್ನದ ಆಭರಣಗಳನ್ನು ಅಡವಿಟ್ಟು 4.40 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣ ಸಂಬಂಧ ಆರೋಪಿಯೋರ್ವನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಚಂದ್ರಗಿರಿ ಕೀಯೂರು ನಿವಾಸಿ ಕೆ.ಸಾಜುದ್ದೀನ್ (47) ಎಂದು ತಿಳಿದು ಬಂದಿದೆ.
ಕಳನಾಡಿನ ಚೆಮ್ನಾಡು ವನಿತಾ ಸರ್ವೀಸ್ ಸೊಸೈಟಿಯಲ್ಲಿ ಕಳೆದ ಮಾರ್ಚ್ ನಿಂದ ಮೂರು ತಿಂಗಳ ಅವಧಿಯಲ್ಲಿ ನಕಲಿ ಚಿನ್ನದ ಸರ ಹಾಗೂ ನಾಲ್ಕು ಬಳೆಗಳು ಸಹಿತ ಒಟ್ಟು 48.21 ಗ್ರಾಂ ತೂಕದ ಆಭರಣಗಳನ್ನು ಅಡವಿಟ್ಟು ಆರೋಪಿ ಸಾಲ ಪಡೆದಿದ್ದನು. ಬಳಿಕ ಸೊಸೈಟಿಯವರು ಆಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಚಿನ್ನವೆಂಬುದು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸೊಸೈಟಿಯ ಕಾರ್ಯದರ್ಶಿ ಉಷಾ ಕುಮಾರಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಾದ ಬಳಿಕ ಆರೋಪಿ ಕೇರಳ ಮತ್ತು ಕರ್ನಾಟಕದ ವಿವಿಧೆಡೆ ತಲೆಮರೆಸಿಕೊಂಡಿದ್ದನು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಮತ್ತೊಂದು ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು, ನಕಲಿ ಚಿನ್ನದ ವಂಚನೆ ಪ್ರಕರಣದಲ್ಲಿ ಮತ್ತೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.



