ಮಲ್ಪೆ: ಅನಧಿಕೃತ ಕಾರ್ಡ್ ಬಳಕೆಯಿಂದ ಎಟಿಎಂ ವ್ಯವಹಾರ ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಎಟಿಎಂ ಡಿಸ್‌ಪ್ಲೇಗೆ ಹಾನಿ ಮಾಡಿದ ಘಟನೆ ಹೂಡೆನಲ್ಲಿ ನಡೆದಿದೆ.
ಆಗಸ್ಟ್ 30ರಂದು ರಾತ್ರಿ ಸುಮಾರು 9:52ರ ವೇಳೆಗೆ ಹೂಡೆ ಕೆನರಾ ಬ್ಯಾಂಕ್ ಶಾಖೆಯ ಆವರಣದಲ್ಲಿರುವ ಎಟಿಎಂಗೆ ಗ್ರಾಹಕರೊಬ್ಬರು ಹಣ ಪಡೆಯಲು ಬಂದಿದ್ದರು. ಈ ವೇಳೆ ಅನಧಿಕೃತ ಕಾರ್ಡ್ ಬಳಕೆಯಿಂದ ವ್ಯವಹಾರ ನಿರಾಕರಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ವ್ಯಕ್ತಿ ಮೊದಲು ಬೈಕ್ ಕೀ ಬಳಸಿ ಎಟಿಎಂ ಡಿಸ್‌ಪ್ಲೇಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ. ಬಳಿಕ ಎಟಿಎಂ ಆವರಣದಲ್ಲಿದ್ದ ಅಗ್ನಿಶಾಮಕ ಸಾಧನವನ್ನು ತೆಗೆದುಕೊಂಡು ಡಿಸ್‌ಪ್ಲೇಗೆ ಎರಡು ಬಾರಿ ಹೊಡೆದಿದ್ದಾರೆ. ಪರಿಣಾಮ ಎಟಿಎಂ ಡಿಸ್‌ಪ್ಲೇ ಮುರಿದು, ಬ್ಯಾಂಕಿನ ಆಸ್ತಿಗೆ ಹಾನಿಯಾಗಿದೆ.
ಈ ಕುರಿತು ಕೆನರಾ ಬ್ಯಾಂಕ್ ಹೂಡೆ ಶಾಖೆಯ ಮ್ಯಾನೇಜರ್ ಕೆ. ರವಿಕುಮಾರ್ ನೀಡಿದ ದೂರಿನ ಮೇರೆಗೆ, ಎಟಿಎಂಗೆ ಹಾನಿ ಮಾಡಿದ ಆರೋಪದ ಮೇಲೆ ಇಸ್ಮಾಯಿಲ್ ಬಿಜಾಪುರಿ ಎಂಬಾತನ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




