ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೊಸಹಳ್ಳಿ / ಕೊತ್ತನೂರು ಗೇಟ್ ಸಮೀಪ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳಾ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, 12 ಮಂದಿ ಗಾಯಗೊಂಡಿದ್ದಾರೆ.
ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಸುಮಾರು 10 ಮಂದಿ ಮಹಿಳೆಯರು ಮಾರುತಿ ಓಮ್ನಿ ಕಾರಿನಲ್ಲಿ (ನಂ KA 40 N 1396) ಶಿಡ್ಲಘಟ್ಟ ತಾಲೂಕಿನ ಹುಜುಗೂರು ಗ್ರಾಮಕ್ಕೆ ಹೂ ಕೊಯ್ಯುವ ಕೆಲಸಕ್ಕೆ ತೆರಳುತ್ತಿದ್ದರು.
ಮುಂಜಾನೆ 2:30 ರ ಸುಮಾರಿಗೆ ರಾಜ್ಯ ಹೆದ್ದಾರಿ-69 ಹೊಸಹಳ್ಳಿ ಗೇಟ್ ಬಳಿ ಎದುರಿನಿಂದ ವೇಗವಾಗಿ ಬಂದ ಮಿನಿ ಕ್ಯಾಂಟರ್ ಗೂಡ್ಸ್ ವಾಹನ ಮತ್ತು ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ರಸ್ತೆಯಲ್ಲೇ ಉರುಳಿ ಬಿದ್ದು ಸಂಪೂರ್ಣ ನಜ್ಜುಗುಜ್ಜಾಗಿವೆ.
ಮೃತಪಟ್ಟವರು ರೂಪಾ (30) ರತ್ನಮ್ಮ (45) ಮುನಿಚೆನ್ನಮ್ಮ (40) ಎಂದು ತಿಳಿಯಲಾಗಿದೆ. ಈ ಮೂವರೂ ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದವರು ಎಂದು ತಿಳಿದು ಬಂದಿದೆ.
ಓಮ್ನಿ ಚಾಲಕ ಮನೋಜ್ ಸೇರಿದಂತೆ 12 ಮಂದಿಗೆ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಗಾಯಾಳುಗಳನ್ನು ಶಿಡ್ಲಘಟ್ಟ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





