ಹಿರಿಯೂರು: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಅದಿವಾಲ ಗ್ರಾಮದಲ್ಲಿ ಮಾನವೀಯತೆ ಮರೆತ ಘಟನೆ ನಡೆದಿದೆ. 45 ವರ್ಷದ ವಿಧವೆ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿ, ನಂತರ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.
ಮೃತ ಮಹಿಳೆ ಗಂಗಮ್ಮ (45), ಅದಿವಾಲ ಗ್ರಾಮದ ನಿವಾಸಿ. ಸೆ.6 ರಂದು ಮಧ್ಯಾಹ್ನ ಹಸು ಮೇಯಿಸಲು ಹೊಲಕ್ಕೆ ಹೋಗಿದ್ದಾಗ, ಅದೇ ಊರಿನ ಚಿರಂಜೀವಿ (18) ಎಂಬ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮಹಿಳೆ ವಿರೋಧಿಸಿ ತನ್ನ ಮಗನಿಗೆ ಕರೆ ಮಾಡುವುದಾಗಿ ಹೇಳಿದಾಗ, ಭಯಗೊಂಡ ಆರೋಪಿ ತನ್ನ ತಂದೆ ಮತ್ತು ಚಿಕ್ಕಪ್ಪಂದಿರಾದ ಲವ, ಕುಶ, ತಿಪ್ಪೇಸ್ವಾಮಿ, ಹನುಮಂತಪ್ಪ ಅವರನ್ನು ಸ್ಥಳಕ್ಕೆ ಕರೆಸಿದ್ದಾನೆ.
ವಿಷಯ ಬಯಲಾಗುತ್ತದೆ ಎಂದು ಹೆದರಿ ಐವರು ಸೇರಿ ಗಂಗಮ್ಮ ಮೇಲೆ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅತ್ಯಾಚಾರ ಯತ್ನದ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಲಾಗಿತ್ತು ಎನ್ನಲಾಗಿದೆ.
ಗಾಯಗೊಂಡ ಗಂಗಮ್ಮ ತನ್ನ ಮಗ ಮನೋಜ್ ಗೆ ಕರೆ ಮಾಡಿದ್ದರು. ಮಗ ಆಟೋದಲ್ಲಿ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಮಗ ಮನೋಜ್ ದೂರಿನ ಮೇರೆಗೆ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 5 ಮಂದಿ ವಿರುದ್ಧ ಕೊಲೆ, ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.




