ಕುಂದಾಪುರ : ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ತ್ರಾಸಿ-ಮರವಂತೆ ಕಡಲತೀರವನ್ನು ಇನ್ನಷ್ಟು ಪ್ರವಾಸಿ ಸ್ನೇಹಿಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೈಗೊಂಡ ಸಮಗ್ರ ಅಭಿವೃದ್ದಿ ಯೋಜನೆಗಳನ್ನು ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳಿಸಲು ರಾಜ್ಯ ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ತ್ರಾಸಿ-ಮರವಂತೆ ಕಡಲತೀರಕ್ಕೆ ಭೇಟಿ ನೀಡಿದ ಸಚಿವರು, ಸ್ಥಳದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಪ್ರಸ್ತುತ ಕೈಗೊಂಡಿರುವ ಕಾಮಗಾರಿಗಳನ್ನು ಯಾವುದೇ ವಿಳಂಬವಿಲ್ಲದೆ ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಡುವು ನೀಡಿದರು.
ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದು, ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಬೇಕು. ತ್ರಾಸಿ-ಮರವಂತೆ ಪ್ರದೇಶವನ್ನು ಇನ್ನಷ್ಟು ಆಕರ್ಷಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಇಂಧನ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಚಿವರು, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಯು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಹಾಗೂ ಅಗತ್ಯ ಪರಿಸರ ಅನುಮತಿಗಳನ್ನು ಪಡೆಯುವ ಹಂತದಲ್ಲಿದೆ ಎಂದು ತಿಳಿಸಿದರು.
ತ್ರಾಸಿ-ಮರವಂತೆ ಕಡಲತೀರದ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.




