Home Latest ಉಡುಪಿ : ಇಂದು ‘ಮೊಂತಿ ಹಬ್ಬ’ ಆಚರಣೆ…!!

ಉಡುಪಿ : ಇಂದು ‘ಮೊಂತಿ ಹಬ್ಬ’ ಆಚರಣೆ…!!

ಉಡುಪಿ: ವಿಶ್ವಾದ್ಯಂತ ಕ್ರೈಸ್ತ ಸಮುದಾಯವು ಸೆ.8ರಂದು ಪವಿತ್ರ ಕನ್ಯಾಮರಿಯಮ್ಮಳ ಜನ್ಮದ ಹಬ್ಬವನ್ನು ಭಕ್ತಿಭಾವದಿಂದ ಆಚರಿಸುತ್ತದೆ. ಕರಾವಳಿ ಕರ್ನಾಟಕದ ಕ್ರೈಸ್ತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಈ ಹಬ್ಬವು ವಿಶಿಷ್ಟ ಸ್ಥಾನ ಹೊಂದಿದ್ದು, ಪ್ರೀತಿಯಿಂದ ‘ಮೊಂತಿ ಹಬ್ಬ’ ಎಂದು ಕರೆಯಲ್ಪಡುತ್ತದೆ.

ಮರಿಯಮ್ಮಳ ಜನ್ಮವನ್ನು ಸ್ಮರಿಸುವ ಈ ಹಬ್ಬವು ದೇವರ ಕೃಪೆಗೆ ಕೃತಜ್ಞತೆ ಸಲ್ಲಿಸುವುದಾಗಿದೆ. ಅಲ್ಲದೆ, ಕುಟುಂಬದ ಏಕತೆ, ಹೆಣ್ಣು ಮಗುವಿನ ಘನತೆ, ಹೊಸ ಬೆಳೆಗೆ ಅಭಿನಂದನೆ ಮತ್ತು ಸೃಷ್ಟಿಯ ಸಂರಕ್ಷಣೆಯ ಮೌಲ್ಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ.

ಮರಿಯಮ್ಮಳ ಜನ್ಮವು ದೇವರ ರಕ್ಷಣಾ ಯೋಜನೆಯ ಮಹತ್ವದ ಅಧ್ಯಾಯಕ್ಕೆ ಮುನ್ನುಡಿಯಾಗಿದೆ. ದೇವರ ತಾಯಿಯಾಗುವ ವಿಶಿಷ್ಟ ಕರೆ ಸ್ವೀಕರಿಸಿದ ಮರಿಯಮ್ಮ, ಮೊದಲಿಗೆ ದೇವಭಕ್ತಿಯುಳ್ಳ ಸರಳ ಕುಟುಂಬದಲ್ಲಿ ಬೆಳೆದ ಬಾಲಕಿಯಾಗಿದ್ದಳು. ಅವಳ ಜೀವನವು ನಂಬಿಕೆ, ವಿನಯ, ಪಾವಿತ್ರ್ಯ, ವಿಧೇಯತೆ ಮತ್ತು ದೇವರ ಚಿತ್ತಕ್ಕೆ ಸಂಪೂರ್ಣ ಸಮರ್ಪಣೆಯ ಮಾದರಿಯಾಗಿದೆ. ಹೀಗಾಗಿ ಮರಿಯಮ್ಮಳ ಜನ್ಮಹಬ್ಬ ಆಚರಿಸುವಾಗ ಪ್ರತಿಯೊಂದು ಮಗುವೂ ದೇವರ ಅಮೂಲ್ಯ ಕೊಡುಗೆ ಎಂಬ ಸತ್ಯವನ್ನು ನಾವು ಹೃದಯದಲ್ಲಿ ಅಚ್ಚೊತ್ತಿಕೊಳ್ಳಬೇಕು.

ವಿಶೇಷವಾಗಿ ಹೆಣ್ಣುಮಗುವಿನ ಘನತೆ ಮತ್ತು ಗೌರವದ ಪ್ರತೀಕವಾಗಿ ಈ ಹಬ್ಬವು ಆಳವಾದ ಸಂದೇಶ ನೀಡುತ್ತದೆ. ಪ್ರತಿ ಹೆಣ್ಣುಮಗುವಿಗೂ ಪ್ರೀತಿ, ಸುರಕ್ಷತೆ, ಉತ್ತಮ ಶಿಕ್ಷಣ, ಸಮಾನ ಅವಕಾಶ ಮತ್ತು ಗೌರವ ನೀಡುವುದು ಕುಟುಂಬದ್ದಷ್ಟೇ ಅಲ್ಲ, ಇಡೀ ಸಮಾಜದ ಜವಾಬ್ದಾರಿ. ಇದು ಮಾನವ ಘನತೆಯನ್ನು ಗೌರವಿಸುವುದಾಗಿದೆ. ಮರಿಯಮ್ಮಳ ಜೀವನವು ಕುಟುಂಬ ಮತ್ತು ಸಮಾಜ ನಿರ್ಮಾಣದಲ್ಲಿ ಹೆಣ್ಣುಮಕ್ಕಳು ಮಹತ್ವದ ಪಾತ್ರ ವಹಿಸಬಲ್ಲರು ಎಂಬುದಕ್ಕೆ ಶ್ರೇಷ್ಠ ಸಾಕ್ಷಿಯಾಗಿದೆ.

ಮೊಂತಿ ಹಬ್ಬದ ಮತ್ತೊಂದು ವಿಶೇಷವೆಂದರೆ ಹೊಸ ಬೆಳೆ. ಪ್ರಕೃತಿಯ ಮೊದಲ ಫಲಗಳನ್ನು ದೇವರಿಗೆ ಕೃತಜ್ಞತೆಯಿಂದ ಅರ್ಪಿಸಲಾಗುತ್ತದೆ. ಕುಟುಂಬದವರೆಲ್ಲರೂ ಸೇರಿ ಹಂಚಿಕೊಂಡು ಸೇವಿಸುವ ಈ ಸಂಪ್ರದಾಯವು ದೇವರ ವರವಾಗಿದೆ ಎಂಬ ಅರಿವು ಮೂಡಿಸುತ್ತದೆ. ಹೊಸ ಬೆಳೆಯ ಹಂಚಿಕೆಯು ಕೇವಲ ಆಹಾರ ಹಂಚಿಕೊಳ್ಳುವ ಕ್ರಿಯೆಯಲ್ಲ. ಅದು ಕೃತಜ್ಞತೆ, ಸಹಭಾಗಿತ್ವ, ಸಹೋದರತ್ವ ಮತ್ತು ಸಹಬಾಳ್ವೆಯ ಸಂಕೇತವಾಗಿದೆ.

ಮೊಂತಿ ಹಬ್ಬವು ಮೂಲತ: ಕುಟುಂಬದ ಹಬ್ಬವಾಗಿದೆ. ಕುಟುಂಬದ ಸದಸ್ಯರೆಲ್ಲ ಸೇರಿ ಪ್ರಾರ್ಥಿಸುವುದು, ಹಿರಿಯರ ಆಶೀರ್ವಾದ ಪಡೆಯುವುದು, ಮಕ್ಕಳೊಂದಿಗೆ ಸಂತೋಷ ಹಂಚಿಕೊಳ್ಳುವುದು ಮತ್ತು ಒಂದೇ ಕಡೆ ಕುಳಿತು ಊಟ ಮಾಡುವುದು ಈ ಹಬ್ಬದ ಅರ್ಥಪೂರ್ಣ ಪರಂಪರೆ. ಆಧುನಿಕ ಜೀವನದಲ್ಲಿ ಕುಟುಂಬದ ಸದಸ್ಯರಿಗೆ ಪರಸ್ಪರ ಸಮಯ ನೀಡುವುದು, ಮಾತುಕತೆ ನಡೆಸುವುದು ಮತ್ತು ಒಟ್ಟಾಗಿ ಪ್ರಾರ್ಥಿಸುವುದು ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೊಂತಿ ಹಬ್ಬವು ಕುಟುಂಬದ ನಿಜವಾದ ಅರ್ಥವನ್ನು ಪುನ@ ನೆನಪಿಸುತ್ತದೆ. ಕುಟುಂಬವೆಂದರೆ ಕೇವಲ ಒಂದೇ ಸೂರಿನಡಿ ವಾಸಿಸುವವರ ಸಮೂಹವಲ್ಲ. ಪರಸ್ಪರ ಪ್ರೀತಿ, ಗೌರವ, ಕ್ಷಮೆ, ತ್ಯಾಗ, ಪ್ರಾರ್ಥನೆ ಮತ್ತು ಹಂಚಿಕೆಯ ಮೂಲಕ ಒಂದಾಗಿರುವ ಜೀವಂತ ಸಮುದಾಯ. ಇಂದು ಒಂಟಿತನ, ತಲೆಮಾರುಗಳ ನಡುವಿನ ಅಂತರ, ಮೌಲ್ಯಗಳ ಅಧ:ಪತನ, ಸಂಬಂಧಗಳಲ್ಲಿನ ಬಿರುಕು ಹೆಚ್ಚುತ್ತಿದೆ. ಹೀಗಾಗಿ ಮರಿಯಮ್ಮಳ ಕುಟುಂಬ ನಮಗೆ ಸುಂದರ ಮಾದರಿ. ದೇವರ ಮೇಲಿನ ನಂಬಿಕೆ, ಪರಸ್ಪರ ಪ್ರೀತಿ, ತ್ಯಾಗ ಮತ್ತು ಸೇವೆಗಳ ಮೇಲೆ ನಿರ್ಮಿತವಾದ ಕುಟುಂಬವೇ ಸಮಾಜದ ನಿಜವಾದ ಬಲವಾಗಿದೆ.

ಈ ಪವಿತ್ರ ಮೊಂತಿ ಹಬ್ಬದ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯ ಸಲ್ಲಿಸುತ್ತೇನೆ. ಕನ್ಯಾಮರಿಯಮ್ಮಳ ಆಶೀರ್ವಾದದಿಂದ ಎಲ್ಲ ಕುಟುಂಬಗಳಲ್ಲಿ ಶಾಂತಿ, ಪ್ರೀತಿ ಮತ್ತು ಏಕತೆ ನೆಲೆಸಲಿ. ಪ್ರತಿಯೊಂದು ಹೆಣ್ಣುಮಗುವೂ ದೇವರ ಅಮೂಲ್ಯ ವರವೆಂದು ಗೌರವಿಸಲ್ಪಡಲಿ. ನಮ್ಮ ಹೊಲಗಳು ಸಮೃದ್ಧಿಯಾಗಲಿ, ನಮ್ಮ ಪರಿಸರ ಹಸಿರಿನಿಂದ ಕಂಗೊಳಿಸಲಿ. ನಮ್ಮ ಹೃದಯಗಳು ದೇವರ ಅನುಗ್ರಹಕ್ಕಾಗಿ ಸದಾ ಕೃತಜ್ಞತೆಯಿಂದ ತುಂಬಿರಲಿ ಎಂದು ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಉಡುಪಿ ಧರ್ಮ ಪ್ರಾಂತ್ಯದ ಅಧ್ಯಕ್ಷ ಇವರು ತಿಳಿಸಿದ್ದಾರೆ.