ಉಡುಪಿ: ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆಯಾಗಿದೆ. ಐತಿಹಾಸಿಕ ಬಾರಕೂರಿನ ಪ್ರಸಿದ್ಧ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ಶಿಲಾಶಾಸನ ಕಂಡುಬಂದಿದೆ.
ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ (ರಿ.) ಗುಳ್ಳಾಡಿ ಮತ್ತು ಆದಿಮ ಕಲಾ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಶಾಸನಗಳ ಸಮೀಕ್ಷೆ ನಡೆಸಿದಾಗ ದೇವಾಲಯದ ಹೊರ ಆವರಣದಲ್ಲಿ ಈ ವೀರಗಲ್ಲು ಪತ್ತೆಯಾಗಿದೆ. ಇದು ಸುಮಾರು 14ನೇ ಶತಮಾನದ್ದಾಗಿದೆ ಎಂದು ಪುರಾತತ್ತ್ವ ವಿದ್ವಾಂಸ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.
ಆತ್ಮಾಹುತಿ ಅಥವಾ ಆತ್ಮಬಲಿ ವೀರಗಲ್ಲುಗಳು ದಕ್ಷಿಣ ಭಾರತದಾದ್ಯಂತ ಕಂಡು ಬರುತ್ತವೆ. ಸುಮಾರು 9-10ನೇ ಶತಮಾನದಿಂದ 14-15ನೇ ಶತಮಾನದ ವರೆಗೆ ಇಂತಹ ಬಲಿದಾನಗಳು ನಡೆದಿರುವುದು ಚಾರಿತ್ರಿಕವಾಗಿ ದಾಖಲಾಗಿವೆ. ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಈ ವೀರಗಲ್ಲು ಆತ್ಮಬಲಿ ಪ್ರಕಾರದ ಅತಿ ವಿಶಿಷ್ಟ ವೀರಗಲ್ಲಾಗಿದೆ.
ವೀರಗಲ್ಲಿನಲ್ಲಿ ಎರಡು ಪಟ್ಟಿಕೆಗಳಿದ್ದು, ಮೇಲ್ಭಾಗದಲ್ಲಿ ಅರೆ ಕೋನಾಕೃತಿಯಲ್ಲಿ ವಿನ್ಯಾಸವಿದೆ. ಕೆಳಗಿನ ಪಟ್ಟಿಕೆಯಲ್ಲಿ ವೀರನೊಬ್ಬ ಬಲಿದಾನಕ್ಕೆ ಸಿದ್ಧನಾಗಿ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದಾನೆ. ಎಡಭಾಗದಲ್ಲಿ ಕಟುಕ ಮತ್ತು ಬಲಭಾಗದಲ್ಲಿ ಬಿದಿರಿನ ಕೆಳಭಾಗ ಹಿಡಿದುನಿಂತ ವ್ಯಕ್ತಿಯ ಚಿತ್ರಣವಿದೆ. ಕಟುಕ ಒಂದೇ ಏಟಿಗೆ ತಲೆಯನ್ನು ಕಡಿದಿದ್ದಾನೆ. ಬಿದಿರಿನ ತುದಿಗೆ ಕಟ್ಟಲಾಗಿದ್ದ ಆತನ ತಲೆ ಸಿಡಿದು ಬಾನಲ್ಲಿ ನೇತಾಡುತ್ತಿದೆ. ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ಮಡಿದ ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವಂತೆ ಚಿತ್ರಿಸಲಾಗಿದೆ. ಮೇಲಿನ ಪಟ್ಟಿಕೆಯಲ್ಲಿ ಶಿವಲಿಂಗ, ಲಿಂಗದ ಎಡಭಾಗದಲ್ಲಿ ವೀರ, ಬಲಭಾಗದಲ್ಲಿ ಶಿವನನ್ನು ಆರಾಧಿಸುತ್ತಿರುವ ಅರ್ಚಕನ ಶಿಲ್ಪವಿದೆ. ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಕೆತ್ತನೆಯಿದೆ.
ಸಂಶೋಧನೆಗೆ ರಾಣಿ ಚಿಕ್ಕಾಯಿತಾಯಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ. ರಘುರಾಮ್ ಶೆಟ್ಟಿ ಗುಳ್ಳಾಡಿ, ದೇವಾಲಯದ ಆಡಳಿತಾಧಿಕಾರಿ ನಾಗಶಯನ, ಮಾಜಿ ಮೊಕ್ತೇಸರ ಮಂಜುನಾಥ್, ಅರ್ಚಕರು, ಶಿರ್ವದ ಎಂಎಸ್ಆರ್ಎಸ್ ಕಾಲೇಜಿನ ಪುರಾತತ್ತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಿಂಚಿತ್ ಮತ್ತು ಶೋಧನ್ ಸಹಕರಿಸಿದರು.
ಸ್ವಯಂ ಆತ್ಮಬಲಿಗೆ ಸಿದ್ಧವಾದ ವ್ಯಕ್ತಿಯು ಕಾಳಿಕಾದೇವಿ ಅಥವಾ ಕಾಲಭೈರವ ದೇವಾಲಯದ ಎದುರು ಎತ್ತರವಾದ ಮಣ್ಣಿನ ವೇದಿಕೆಯ ಮೇಲೆ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾನೆ. ದೇವಾಲಯದಲ್ಲಿ ಬಲಿಪೂಜೆ ನಡೆಸಿದ ಬಳಿಕ ಕಟುಕನೊಬ್ಬ ಕತ್ತಿಯಿಂದ ಒಂದೇ ಏಟಿಗೆ ಆತನ ತಲೆಯನ್ನು ಕತ್ತರಿಸುತ್ತಾನೆ. ಇದು ಆತ್ಮಬಲಿ. ಆದರೆ, ಸಿಡಿತಲೆ ಬಲಿದಾನದಲ್ಲಿ ಆತ್ಮಬಲಿಗೆ ಸಿದ್ಧವಾಗಿ ಕುಳಿತ ವ್ಯಕ್ತಿಯ ತಲೆಯ ಜುಟ್ಟನ್ನು ಬಿದಿರಿನ ತುದಿಗೆ ಕಟ್ಟಲಾಗುತ್ತದೆ. ಕಟುಕ ಒಂದೇ ಏಟಿಗೆ ತಲೆ ಕತ್ತರಿಸುತ್ತಿದ್ದಂತೆ ಮೃತನ ತಲೆ ತೇಲಾಡುತ್ತದೆ. ಇಂತಹ ಆತ್ಮಬಲಿಯ ಆಚರಣೆಯ ಕುರಿತು ಸಿಡಿತಲೆ ವೀರಗಲ್ಲು ಮಾಹಿತಿ ನೀಡುತ್ತದೆ.




