ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಸಂಜೀವ ಎಂಬವರು ಸಮುದ್ರಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಆಗಸ್ಟ್ 14ರಂದು ನಡೆದಿದೆ.
ಭದ್ರಾವತಿ ತಾಲೂಕಿನ ಬೆಳ್ಳಿಗೇರಿ ಗ್ರಾಮದ 71 ವರ್ಷದ ಸುನಿತಮ್ಮ ಅವರ ಮಗ ಸಂಜೀವ ಅವರು ಮಲ್ಪೆ ಬಂದರಿನ ‘ರಜತ’ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 10ರಂದು ರಾತ್ರಿ ಬೋಟಿನ ಚಾಲಕ ದುರ್ಗಾದಾಸ ಮಂಜು ಮೊಗೇರ ಹಾಗೂ ಇತರ ಕಾರ್ಮಿಕರೊಂದಿಗೆ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು.
ಆಗಸ್ಟ್ 14ರಂದು ಮಧ್ಯಾಹ್ನ ಸುಮಾರು 1:30ರ ವೇಳೆಗೆ ಸಮುದ್ರದಲ್ಲಿ ಬಿಟ್ಟಿದ್ದ ಬಲೆಯನ್ನು ಮೇಲಕ್ಕೆ ಎಳೆಯುತ್ತಿದ್ದ ವೇಳೆ ಏಕಾಏಕಿ ಅಬ್ಬರದ ಅಲೆ ಬಂದು ಬೋಟು ಅಲುಗಾಡಿದೆ. ಈ ಸಂದರ್ಭದಲ್ಲಿ ಸಂಜೀವ ಅವರು ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು.
ತಕ್ಷಣ ಅವರು ಬಿದ್ದ ಸ್ಥಳದಲ್ಲಿ ಟ್ರಾಲ್ ಹಾಕಿ ಹುಡುಕಾಟ ನಡೆಸಲಾಗಿದ್ದು, ಸಂಜೆ ಸುಮಾರು 6:30ರ ವೇಳೆಗೆ ಸಂಜೀವ ಅವರನ್ನು ಪತ್ತೆಹಚ್ಚಲಾಗಿದೆ. ಬಳಿಕ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಸಂಜೀವ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 50/2026, ಕಲಂ 194 BNSSರಂತೆ ಪ್ರಕರಣ ದಾಖಲಾಗಿದೆ.



