ಮುಂಡ್ಕೂರು: ಕೃಷಿ ಕೆಲಸದ ಮಹತ್ವವನ್ನು ಅರಿಯದ ಮುಂದಿನ ಪೀಳಿಗೆಗೆ ‘ಕೆಸರ್‌ಡ್ ಗೊಬ್ಬುಲು’ ಕ್ರೀಡಾಕೂಟ ಪರಿಣಾಮಕಾರಿಯಾಗಿದೆ ಎಂದು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ ಹೇಳಿದರು.
ನಮ್ಮ ಫ್ರೆಂಡ್ಸ್ (ರಿ.) ಮುಂಡ್ಕೂರು ಇದರ ಮೂರನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ಮುಂಡ್ಕೂರು ಗರಡಿ ಬಳಿಯ ಇಂದಿರಾನಗರದ ನೂಜಿ ಗದ್ದೆಯಲ್ಲಿ ‘ಕೆಸರ್‌ಡ್ ಗೊಬ್ಬುಲು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯಿಂದ ಯುವ ಜನತೆ ದೂರ ಹೋಗುತ್ತಿರುವ ಈ ಕಾಲದಲ್ಲಿ ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಈ ‘ಕೆಸರ್‌ಡ್ ಗೊಬ್ಬುಲು’ ಕಾರ್ಯಕ್ರಮ ಪ್ರೇರಣೆಯಾಗಲಿ. ಸಮಾನ ಮನಸ್ಕರ ಸಂಘಟನೆಯ ಮೂಲಕ ಸಮಾಜದ ಸೇವೆಯು ಕೂಡ ನಡೆಯುತ್ತಿರುವುದು ಶ್ಲಾಘನೀಯ ಎಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೋರಿಬೆಟ್ಟು ಗುತ್ತು ಸುರೇಂದ್ರ ಶೆಟ್ಟಿಯವರು ಕಲಶದಲ್ಲಿ ಹಿಂಗಾರ ಅರಳಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಇನ್ನಾ ಕುರ್ಕಿಲ್‌ಬೆಟ್ಟು ಬಾಳಿಕೆ ಮನೆಯ ಶ್ರೀಮತಿ ರೂಪ ಸುಕೇಶ್ ಶೆಟ್ಟಿಯವರು ಗದ್ದೆಗೆ ಪುಷ್ಪಾರ್ಚನೆ ಮಾಡಿದರು. ಸಂಘದ ಅಧ್ಯಕ್ಷ ನವನೀತ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಮುಂಡ್ಕೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ದೇವಪ್ಪ ಸಪಳಿಗ, ಮುಲ್ಲಡ್ಕ ಪರಾಡಿ ರವೀಂದ್ರ ಶೆಟ್ಟಿ, ಮುಂಬೈ ಉದ್ಯಮಿ ವಸಂತ ಪೂಜಾರಿ, ಕಿನ್ನಿಗೋಳಿ ರೋಟರಿ ಕ್ಲಬ್‌ನ ಪೂರ್ವಧ್ಯಕ್ಷ ಸಾಯಿನಾಥ್ ಶೆಟ್ಟಿ, ಗಾಂದಡ್ಪು ಮಹಾದೇವಿ ದೇವಸ್ಥಾನದ ಅರ್ಚಕ ಕೇಶವ ಅಂಚನ್, ಸಂತೋಷ್ ಕೇಶವ ಅಂಚನ್, ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಉದಯ ಹೆಗ್ಡೆ, ಜಯರಾಮ ಕುಲಾಲ್, ಸುಧಾಕರ ಕುಲಾಲ್, ಪ್ರಭಾಕರ ಶೆಟ್ಟಿ, ಮಹಮ್ಮದ್ ಆಲಿ, ಶೇಖರ ಪೂಜಾರಿ ದುಡ್ಡು, ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಸಚ್ಚೇರಿಪೇಟೆ, ಕೋಶಾಧಿಕಾರಿ ಗುರು ತಿಲಕ್, ಕ್ರೀಡಾ ಕಾರ್ಯದರ್ಶಿಗಳಾದ ನಿಶಾಂತ್ ಅಂಚನ್ ಮತ್ತು ಶರತ್ ಶೆಟ್ಟಿ ಗರಡಿ, ಸುರೇಶ್ ಪೂಜಾರಿ ಕಲ್ಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಫ್ರೆಂಡ್ಸ್ ಸಂಚಾಲಕ ಅರುಣ್ ರಾವ್ ಸ್ವಾಗತಿಸಿ, ಉದಯ್ ಕುಮಾರ್ ವಂದಿಸಿದರು. ಸಂಕಲಕರಿಯ ಸಂದೀಪ್ ಪೂಜಾರಿ ನಿರೂಪಿಸಿದರು.




