ಮಂಗಳೂರು: ಕರಂಗಲ್ಪಾಡಿಯಿಂದ ನ್ಯಾಯಾಲಯದತ್ತ ತೆರಳುವ ರಸ್ತೆಯ ತಿರುವಿನಲ್ಲಿ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಗೂಡ್ಸ್ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಸಹಿತ ಹಲವರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಆಟೋ ಚಾಲಕ ಮಂಜೇಶ್ವರ-ಹೊಸಂಗಡಿ ನಿವಾಸಿ ಚಂದ್ರ (55) ಎಂದು ತಿಳಿದು ಬಂದಿದೆ.
ನ್ಯಾಯಾಲಯದ ಕಡೆಯಿಂದ ಕೆಳಭಾಗಕ್ಕೆ ಗೂಡ್ಸ್ ಆಟೋ ಬರುತ್ತಿದ್ದ ವೇಳೆ, ನ್ಯಾಯಾಲಯದ ರಸ್ತೆಯತ್ತ ಕಾರು ತಿರುವು ಪಡೆಯುತ್ತಿದ್ದ ಸಂದರ್ಭ ಎರಡೂ ವಾಹನಗಳು ಪರಸ್ಪರ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ಆಟೋ ಪಲ್ಟಿಯಾಗಿ ರಸ್ತೆಯಲ್ಲಿ ಉರುಳಿ, ಸಮೀಪದಲ್ಲಿದ್ದ ಸ್ಕೂಟರ್ ಮೇಲೆ ಬಿದ್ದಿದೆ. ಘಟನೆಯಿಂದ ಸ್ಕೂಟರ್‌ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಕಾರು ಚಾಲಕನ ಕೈಗೂ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



