ಉಡುಪಿ: ಕಲ್ಯಾಣಪುರ–ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ದೇಶದ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ವಿದೇಶಿ ಪ್ರಜೆಯಾಗಿದ್ದ ಹಿನ್ನೆಲೆಯಲ್ಲಿ ನಿತ್ಯಾನಂದ ಒಳಕಾಡುವರು ಘಟನೆಯ ಮಾಹಿತಿ ಉಡುಪಿ ನಗರ ಪೊಲೀಸರಿಗೆ ನೀಡಿದ್ದರು. ಪೊಲೀಸರ ವಿಚಾರಣೆಯಲ್ಲಿ ಆತನ ವೀಸಾ ಅವಧಿ ಮುಗಿದಿರುವುದು, ಪಾಸ್‌ಪೋರ್ಟ್ ನಿಷ್ಕ್ರಿಯಗೊಂಡಿರುವುದು ಹಾಗೂ ಗೋವಾ ರಾಜ್ಯದಲ್ಲಿ ಆತನ ವಿರುದ್ಧ ಪ್ರಕರಣವೊಂದು ವಿಚಾರಣೆಯಲ್ಲಿರುವುದು ತಿಳಿದುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಪ್ರಕರಣದ ಭೀತಿಯಿಂದ ಆತ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ. ಬಳಿಕ ನಗರದಲ್ಲಿ ಸುತ್ತಾಡುತ್ತಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದು ಮತ್ತೆ ಆಸ್ಪತ್ರೆಗೆ ದಾಖಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಅವರ ಆದೇಶದಂತೆ ಗುಣಮುಖನಾದ ಬಳಿಕ ಕಾರ್ಕಳದ ಹೊಸಬೆಳಕು ಪುನರ್ವಸತಿ ಕೇಂದ್ರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಯಿತು. ರಷ್ಯಾದಲ್ಲಿರುವ ತನ್ನ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಲು ಸಹ ಅವಕಾಶ ಕಲ್ಪಿಸಲಾಯಿತು.
ಆಶ್ರಮದ ಸಂಚಾಲಕಿ ತನುಲಾ ತರುಣ್ ಅವರು ಆತನಿಗೆ ಊಟೋಪಚಾರದ ವ್ಯವಸ್ಥೆ ಮಾಡಿದರು. ಭದ್ರತೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಸಂಪೂರ್ಣ ಚೇತರಿಸಿಕೊಂಡ ಬಳಿಕ ಉಡುಪಿ ಪೊಲೀಸರು ವಿದೇಶಿ ಪ್ರಜೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಗೋವಾ ಪೊಲೀಸರಿಗೆ ಹಸ್ತಾಂತರಿಸಿದರು.




