Home Crime ಕಾಪು: ಬೇಕರಿ ಸಿಬ್ಬಂದಿ ನಾಪತ್ತೆ : ಪತ್ರ ಬರೆದು ತೆರಳಿದ ವ್ಯಕ್ತಿಗಾಗಿ ಹುಡುಕಾಟ…!!

ಕಾಪು: ಬೇಕರಿ ಸಿಬ್ಬಂದಿ ನಾಪತ್ತೆ : ಪತ್ರ ಬರೆದು ತೆರಳಿದ ವ್ಯಕ್ತಿಗಾಗಿ ಹುಡುಕಾಟ…!!

ಕಾಪು, ಜು. 17: ಕಟಪಾಡಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸುಧೀರ (36) ಎಂಬವರು ಪತ್ರ ಬರೆದು ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದು, ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ವೆ ಗ್ರಾಮದ ಸುಕುಮಾರ ಪೂಜಾರಿ ಅವರು ನೀಡಿದ ದೂರಿನ ಪ್ರಕಾರ, ಅವರ ಹಿರಿಯ ಸಹೋದರ ಸುಧೀರ ಅವರು ಅವಿವಾಹಿತರಾಗಿದ್ದು, ಕಳೆದ ಸುಮಾರು 15 ವರ್ಷಗಳಿಂದ ಕಟಪಾಡಿಯ ಗೋಪಾಲ ಮೊಗವೀರ ಅವರ ಪದ್ಮ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು-ಮೂರು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು.

ಜುಲೈ 15ರಂದು ಬೆಳಿಗ್ಗೆ ಬೇಕರಿ ಮಾಲೀಕ ಗೋಪಾಲ ಮೊಗವೀರ ಅವರು ಸುಕುಮಾರ ಅವರಿಗೆ ಕರೆ ಮಾಡಿ, ಸುಧೀರ ಮನೆಗೆ ಬಂದಿದ್ದಾರೆಯೇ ಎಂದು ವಿಚಾರಿಸಿದ್ದಾರೆ. ಆಗ ಅವರು, ಜುಲೈ 14ರಂದು ಬೆಳಿಗ್ಗೆ 8.35ಕ್ಕೆ KA-20-HF-7786 ಸಂಖ್ಯೆಯ ಸ್ಕೂಟರ್‌ನಲ್ಲಿ “ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ ಬೇಕರಿಯಿಂದ ತೆರಳಿರುವುದಾಗಿ ತಿಳಿಸಿದ್ದಾರೆ.

ಅದೇ ದಿನ ಸುಕುಮಾರ ಅವರ ಮನೆಗೆ ಸುಧೀರ ಬರೆದ ಪತ್ರವೊಂದು ತಲುಪಿದ್ದು, ಅದರಲ್ಲಿ “ನನ್ನ ಅಂತಿಮ ನಿರ್ಧಾರ” ಎಂಬ ಉಲ್ಲೇಖದೊಂದಿಗೆ ಹಣಕಾಸಿನ ವಿವರಗಳನ್ನು ಬರೆದಿರುವುದು ಕಂಡುಬಂದಿದೆ.

ಕುಟುಂಬದವರು ಹಾಗೂ ಸ್ನೇಹಿತರು ಉಡುಪಿ ಜಿಲ್ಲೆಯ ವಿವಿಧೆಡೆ ಹುಡುಕಾಟ ನಡೆಸಿದರೂ ಸುಧೀರ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರು ಬಳಸುತ್ತಿದ್ದ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.

ಈ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 86/2026ರಡಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.