ಉಡುಪಿ: ಅಕ್ಕ ಕೆಫೆ ಮಹಿಳಾ ಆರ್ಥಿಕ ಸಬಲೀಕರಣದ ಒಂದು ಮಹತ್ತರ ಯೋಜನೆಯಾಗಿದ್ದು, ಇದನ್ನು ಸಂಪೂರ್ಣವಾಗಿ ಮಹಿಳೆಯರೇ ಮುನ್ನಡೆಸುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರೂ ಇಂದು ಉದ್ಯಮಿಗಳಾಗಿ ಆರ್ಥಿಕ ಸ್ವಾತಂತ್ರ್ಯಕ್ಕೆ ಹೊಸ ಆಯಾಮ ನೀಡುತ್ತಿದ್ದಾರೆ. ಮಹಿಳಾ ಆರ್ಥಿಕ ಸ್ವಾವಲಂಬನೆಯಲ್ಲಿ ಉಡುಪಿ ಮೈಲಿಗಲ್ಲು ಆಗಿದೆ ಎಂದುಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿ&ಕಿನ್ನಿಮೂಲ್ಕಿ ಮಾರ್ಗದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಮತ್ತು ಜಿಪಂ ಉಡುಪಿ ವತಿಯಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗಾಗಿ ಆರಂಭಿಸಿರುವ ‘ಅಕ್ಕ ಕೆಫೆ’ಯನ್ನು ಶನಿವಾರ (ಆ.15) ಉದ್ಘಾಟಿಸಿ ಮಾತನಾಡಿದರು.
ಉಡುಪಿಯಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಸಚಿವ ರಿಜ್ವಾನ್ ಅರ್ಷದ್ ಒಳಕಲ್ಲಿನಲ್ಲಿ ಸಾಂಬಾರದ ಮಸಾಲೆ ರುಬ್ಬಿದರು.
ಸ್ವಾಭಿಮಾನದ ಸಂಕೇತ
ಅಕ್ಕ ಕೆಫೆಯನ್ನು ಮಣಿಪುರ ಗ್ರಾಪಂನ ಉಜ್ವಲ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಅತ್ಯಂತ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ. ಇಲ್ಲಿ ಆರೋಗ್ಯಕರ ಹಾಗೂ ಕರಾವಳಿ ಸಾಂಪ್ರದಾಯಿಕ ಶೈಲಿಯ ಅಪ್ಪಟ ರುಚಿಕರ ಆಹಾರ ಪದಾರ್ಥ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದು ಊಟೋಪಹಾರದ ತಾಣವಷ್ಟೇ ಅಲ್ಲ, ತಳಮಟ್ಟದ ಮಹಿಳೆಯರ ಅಡುಗೆ ಕೌಶಲ ಪರಿಚಯಿಸುವ ತಾಣವೂ ಹೌದು. ಇದು ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತಿಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್, ಜಿಪಂ ಯೋಜನಾ ನಿರ್ದೇಶಕ ಉದಯ್ ಶೆಟ್ಟಿ, ತಾಪಂನ ಇಒ ವಿಜಯಾ, ಸಂಜೀವಿನಿ ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಉಪಸ್ಥಿತರಿದ್ದರು.




