Home Crime ಅಕ್ರಮ ಮರ ದಿಮ್ಮಿಗಳ ಸಾಗಾಟ : ಲಾರಿ, ಮರದ ದಿಮ್ಮಿ ವಶಕ್ಕೆ...

ಅಕ್ರಮ ಮರ ದಿಮ್ಮಿಗಳ ಸಾಗಾಟ : ಲಾರಿ, ಮರದ ದಿಮ್ಮಿ ವಶಕ್ಕೆ ಆರೋಪಿ ಅರೆಸ್ಟ್..!!

ಮಂಗಳೂರು : ಅಕ್ರಮವಾಗಿ ಮರ ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆಹಚ್ಚಿ, ಲಾರಿ ಹಾಗೂ ಮರದ ದಿಮ್ಮಿಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮಾಡಾವು ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಆಗಸ್ಟ್ 14ರಂದು ನೆಟ್ಟಾರು ಎಂಬಲ್ಲಿ ಅಕ್ರಮವಾಗಿ ಕಡಿದ ಕಿರಾಲು ಭೋಗಿ ಜಾತಿಯ ಮರದ ದಿಮ್ಮಿಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಬೆಳ್ಳಾರೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಲಾರಿಯನ್ನು ಕೆಯ್ಯೂರು ಗ್ರಾಮದ ಸಂತೋಷ್ ನಗರದಲ್ಲಿ ಅರಣ್ಯ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮರ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ಲಾರಿ ಹಾಗೂ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂತೋಷ್ ರೈ, ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಹಾಗೂ ಸೋಮನಾಥ್ ಮತ್ತು ಚಾಲಕ ಜಯಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರೋಶಿನಿ ಎ.ಜೆ. ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಮುಂದಿನ ತನಿಖೆ ಕೈಗೊಂಡಿದ್ದಾರೆ.