ಕಾರ್ಕಳ: ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಕಳದ ಮಾನ್ಯ ಪಿ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಎಲ್.ಪಿ.ಸಿ. ನಂ.14/2004 ಹಾಗೂ ಅಪರಾಧ ಸಂಖ್ಯೆ 92/1989 (ಕಲಂ 143, 147, 148, 447, 448, 323, 326 ಹಾಗೂ 149 ಐಪಿಸಿ) ಪ್ರಕರಣದಲ್ಲಿ ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪೀಟರ್ ಆಗಸ್ಟಿನ್ ಮಾರ್ಟೀಸ್ (60), ತಂದೆ ಆಗಸ್ಟಿನ್ ಮಾರ್ಟೀಸ್, ನಿವಾಸಿ ರಾಮಸಮುದ್ರ, ಕಾರ್ಕಳ ಕಸಬ ಗ್ರಾಮ, ಕಾರ್ಕಳ ತಾಲೂಕು ಇವರನ್ನು ಜುಲೈ 27, 2026ರಂದು ಕಾರ್ಕಳ ತಾಲೂಕಿನ ರಾಮಸಮುದ್ರದ ಬಳಿ ಬಂಧಿಸಲಾಯಿತು.
ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. 2096 ಲೋಕೇಶ್ ಮತ್ತು ಹೆಚ್.ಸಿ. 83 ಸಂಜಯ್ ಅವರ ತಂಡ ಆರೋಪಿಯನ್ನು ವಶಕ್ಕೆ ಪಡೆದು ಅದೇ ದಿನ ಮಾನ್ಯ ಕಾರ್ಕಳ ಪಿ.ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




