ಮಲ್ಪೆ, ಜೂ. 28: ತಾಯಿಯ ಹೆಸರಿನಲ್ಲಿದ್ದ ಮನೆ ಹಾಗೂ ಜಾಗವನ್ನು ಬೆದರಿಕೆ ಹಾಕಿ ಬಲವಂತವಾಗಿ ತನ್ನ ಹೆಸರಿಗೆ ನೋಂದಾಯಿಸಿಕೊಂಡು, ಬಳಿಕ ಪೋಷಕರನ್ನು ಮನೆಯಿಂದ ಹೊರಹಾಕಿದ ಆರೋಪದಡಿ ಮಗನ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಾನಿಡಿಯೂರು ಗ್ರಾಮದ ಸರಸು ಸುವರ್ಣ (69) ನೀಡಿದ ದೂರಿನ ಪ್ರಕಾರ, ಅವರು ತಮ್ಮ ಎರಡನೇ ಮಗ ವಿನೋದ ಸುವರ್ಣ ಅವರೊಂದಿಗೆ ವಾಸವಾಗಿದ್ದರು. ಮನೆ ಹಾಗೂ 11 ಸೆಂಟ್ಸ್ ಜಾಗ ಸರಸು ಸುವರ್ಣ ಅವರ ಹೆಸರಿನಲ್ಲಿತ್ತು.
ವಿನೋದ ಸುವರ್ಣ ಅವರು ಮನೆ ಮತ್ತು ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸಿದ್ದು, ಇದಕ್ಕೆ ನಿರಾಕರಿಸಿದ ವೇಳೆ ತಾಯಿ ಹಾಗೂ ತಂದೆ ದಾಸು ತಿಂಗಳಾಯ ಅವರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಒತ್ತಾಯಪೂರ್ವಕವಾಗಿ ನೋಂದಣಿ ಕಚೇರಿಗೆ ಕರೆದುಕೊಂಡು ಹೋಗಿ, 11 ಸೆಂಟ್ಸ್ ಜಾಗ ಹಾಗೂ ಮನೆಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವುದಾಗಿ ಹಾಗೂ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಸರಸು ಸುವರ್ಣ ಅವರು ಎಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರ ತಿಳಿದ ಬಳಿಕ ವಿನೋದ ಸುವರ್ಣ ಅವರು ತಾಯಿ, ತಂದೆ ಹಾಗೂ ಸಹೋದರಿ ವಿನುತಾ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 73/2026ರಡಿ ಬಿಎನ್‌ಎಸ್ ಕಲಂ 115(2) ಹಾಗೂ 351(2) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




